6ರಂದು ಪಿರಿಯಾಪಟ್ಟಣಕ್ಕೆ ಸಿಎಂ
ಪಿರಿಯಾಪಟ್ಟಣ: ಮಾ.6ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ. ಶಿಖಾ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾ. 6ರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿಗಳು ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 140 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದರು.ಇಒ ಮಹದೇವಸ್ವಾಮಿ, ಪ್ರಭಾರ ತಹಸೀಲ್ದಾರ್ ಪ್ರಕಾಶ್, ಸರ್ಕಲ್ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಎಂಜಿನಿಯರ್ ಮನೋಹರ್, ಮಂಜುನಾಥ್ ಇದ್ದರು.
ಸಹಾಯಧನ ವಿತರಣೆ
ಕೆ.ಆರ್. ನಗರ: ಸರ್ಕಾರದಿಂದ ದೊರೆಯುವ ಸಹಾಯ ಧನವನ್ನು ಸಾವಯವ ಸಂಘಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಕೃಷಿ ಚಟುವಟಿಕೆ ಕೈಗೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಎಂ. ಚಂದ್ರಶೇಖರ್ ಹೇಳಿದರು. ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2013-14ನೇ ಸಾಲಿನ ಸಾವಯವ ಗ್ರಾಮ ಯೋಜನೆಯ ಕ್ರಿಯಾ ಯೋಜನೆಯಡಿ ತಾಲೂಕಿನ ಬೀರನಹಳ್ಳಿ ಗ್ರಾಮದ ಬಸವೇಶ್ವರ ಸುಸ್ಥಿರ ಸಾವಯವ ಕೃಷಿಕರ ಸಂಘದ ಪ್ರತಿನಿಧಿಗಳಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು. ಕೃಷಿ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳನ್ನು ಬಳಸಿಕೊಳ್ಳಲು ರೈತರು ಸದಾ ಕೃಷಿ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿದ್ದು ಇತರರಿಗೂ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ಉತ್ತಮ ಬೆಳೆ ಬೆಳೆಯುವಂತೆ ಸಲಹೆ ನೀಡಿದರು. ಸಂಘದ ಅಧ್ಯಕ್ಷ ಪುಟ್ಟಮಾದು, ಸಾವಯವ ಕೃಷಿ ಕ್ಷೇತ್ರಾಧಿಕಾರಿ ಭಾಗ್ಯಮ್ಮ, ಕಚೇರಿ ಅಧೀಕ್ಷಕ ಸುಧೀಂದ್ರ ಇದ್ದರು.
ಸಿಂಹ ನಿಧನಕ್ಕೆ ಸಂತಾಪ
ತಾಂಡವಪುರ: ರಂಗಭೂಮಿ ಕಲಾವಿದ, ಹಿರಿಯ ಚಿತ್ರನಟ ಸಿ.ಆರ್. ಸಿಂಹ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ. ಸಿ.ಆರ್. ಸಿಂಹ ಅವರು ಸಮಾಜದ ಅಂಕು ಡೊಂಕು ತಿದ್ದುವಂಥ ಪಾತ್ರಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದರು. ಅಂಥ ಮಹಾನ್ ಕಲಾವಿದನನ್ನು ಕಳೆದುಕೊಂಡು ಕನ್ನಡ ಚಲನಚಿತ್ರ ರಂಗ ಬಡವಾಗಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜಿಪಂ ಸದಸ್ಯೆ ರೇವಮ್ಮ ಮಾಲೇಗೌಡ, ತಾಪಂ ಸದಸ್ಯ ಹೆಜ್ಜಿಗೆ ಗೋವಿಂದ ರಾಜು, ಶ್ರೀಕಂಠು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಇಂಧನ ಬಾಬು, ಬಸವೇಗೌಡ, ಅಹಿಂದ ಮುಖಂಡರಾದ ಮನ್ನೇಗೌಡ, ಬಿ.ಎಂ. ನಾಗರಾಜು, ಬಿ.ಪಿ. ಮಹದೇವು, ಛತ್ರ ಹೋಬಳಿಯ ಕಾಂಗ್ರೆಸ್ ಮುಖಂಡರಾದ ಅರ್ಕೇಶ್, ಕಿಟ್ಟಿ, ಸಿದ್ದು ಬಳಗದ ತಾಲೂಕು ಅಧ್ಯಕ್ಷ ಅಣ್ಣಯ್ಯ ಪತ್ರಿಕಾ ಹೇಳಿಕೆ ನೀಡಿದ್ದಾರೆ.