74 ಲಕ್ಷ ಉಳಿತಾಯ ಬಜೆಟ್
ಬನ್ನೂರು: ಬನ್ನೂರು ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ 73,54,960 ಉಳಿತಾಯದ ಬಜೆಟ್ ಅನ್ನು ಆಡಳಿತಾಧಿಕಾರಿ ಬಸವರಾಜು ಅಧ್ಯಕ್ಷತೆಯಲ್ಲಿ ಮುಖ್ಯಾಧಿಕಾರಿ ಎಸ್.ಲೋಕೇಶ್ ಮಂಡಿಸಿದರು.
2014-15ನೇ ಸಾಲಿನ ಮುಂಗಡ ಪತ್ರಕ್ಕೆ ಅನುಮೋದಿಸಲಾಗಿದ್ದು ಈ ಬಗ್ಗೆ ಲಿಖಿತ ಮಾಹಿತಿ ನೀಡಿರುವ ಪುರಸಭೆ ಮುಖ್ಯಾಧಿಕಾರಿ 23,07,15,980ರಷ್ಟು ಮೊತ್ತದ ಆದಾಯದೊಂದಿಗೆ ಹಿಂದಿನ ವರ್ಷದ ಆರಂಭಿಕ ಶುಲ್ಕ 6,47,06,410 ಮೊತ್ತವನ್ನು ಸೇರಿಸಿ ಒಟ್ಟು 28,80,69,430 ಮೊತ್ತದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಾದ ನೀರು ಸರಬರಾಜು, ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಬಿಡಗಡೆಯಾಗುವ ನಿರೀಕ್ಷಿತ ಅನುದಾನಗಳು ರಾಜ್ಯ ಹಣಕಾಸು ಯೋಜನೆ ಅಭಿವೃದ್ಧಿ ಅನುದಾನ 5 ಕೋಟಿ, 13ನೇ ಹಣಕಾಸು ಯೋಜನೆ ಅನುದಾನ 1.60 ಲಕ್ಷ, ಶಾಸಕರ ವಿಶೇಷ ಅನುದಾನದಡಿ 2 ಕೋಟಿ, ವೇತನಗಳ ಪಾವತಿಗೆ 2,2655, ಬೀದಿ ದೀಪ, ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ಲು ಪಾವತಿಗೆ 1 ಕೋಟಿಯಂತೆ 23,07,15,980ರಷ್ಟು ಆದಾಯ ನಿರೀಕ್ಷಿಸಲಾಗಿದೆ.
ನೀರಿಕ್ಷಿತ ಪುರಸಭೆ ಆದಾಯದ ಮೂಲಗಳಿಂದ ಆಸ್ತಿ ತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಖಾತೆ ವರ್ಗಾವಣೆ, ಅಭಿವೃದ್ಧಿ ಶುಲ್ಕಗಳು, ಹರಾಜು, ಜೆಸಿಬಿ, ಸಕ್ಕಿಂಗ್ ಯಂತ್ರ ಬಾಡಿಗೆ ಉಪಕರಣ ಮತ್ತಿತರ ಮೂಲಗಳಿಂದ 1.06 ಕೋಟಿ, ನಿರೀಕ್ಷಿಸಲಾಗಿದ್ದು ಒಟ್ಟು ನಿರೀಕ್ಷಿತ ಆದಾಯದಲ್ಲಿ ಕಚೇರಿ ನಿರ್ವಹಣೆಗೆ 26 ಲಕ್ಷ, ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ಲು ಪಾವತಿಗೆ 1 ಕೋಟಿ, ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ 5.21 ಕೋಟಿ, ಮಳೆ ನೀರು ಚರಂಡಿ ಅಭಿವೃದ್ಧಿಗೆ 2.45 ಕೋಟಿ, ಬೀದಿ ದೀಪ ವ್ಯವಸ್ಥೆ ಅಭಿವೃದ್ಧಿಗೆ 1.12 ಕೋಟಿ, ಜಯಲಕ್ಷ್ಮೀ ರೈಸ್ ಮಿಲ್ ರಸ್ತೆಯಲ್ಲಿ ಮುನಿಸಿಪಲ್ ಮಾರುಕಟ್ಟೆ ನಿರ್ಮಾಣಕ್ಕೆ 1 ಕೋಟಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಯಡಿ ಕಟ್ಟಡ ಅಭಿವೃದ್ಧಿ, ಯಂತ್ರೋಪಕರಣಗಳ ಮತ್ತು ಭಾರಿ ವಾಹನಗಳ ಖರೀದಿ ಮತ್ತು ನೆಲಭರ್ತಿ ಜಾಗ ಅಭಿವೃದ್ಧಿಗೆ 1.2 ಕೋಟಿ, ಎಸ್ಸಿ, ಎಸ್ಟಿ ಕಲ್ಯಾಣ ನಿಧಿಯಡಿ ಶೇ.22.75 ಯೋಜನೆಯಲ್ಲಿ 47 ಲಕ್ಷ, ಇತರೆ ಬಡ ಜನರ ಕಲ್ಯಾಣ ನಿಧಿಯಡಿ ಶೇ.077.25ರ ಯೋಜನೆಯಲ್ಲಿ 15 ಲಕ್ಷ ಮತ್ತು ಅಂಗವಿಕಲರ ಕಲ್ಯಾಣನಿಧಿಯಡಿ ಶೇ.03 ಯೋಜನೆಯಲ್ಲಿ 6.20 ಲಕ್ಷ ಮೀಸಲಿರಿಸಲಾಗಿದೆ.
ಇದಲ್ಲದೇ 2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪಟ್ಟಣದ ರಸ್ತೆಯಾದ ಮೈಸೂರು- ಮಳವಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಲು 41 ಕೋಟಿ ನಿಗದಿಪಡಿಸಿದ್ದು, ಬನ್ನೂರು ಪಟ್ಟಣವು ಈಗಾಗಲೇ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಾದ ಯುಡಿಐಎಸ್ಎಂಟಿ ಯೋಜನೆಯಡಿ ಆಯ್ಕೆಯಾಗಿದೆ. 12.60 ಕೋಟಿ ಮೊತ್ತದ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದೆ. ಬನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಬದಲಾಯಿಸಿ ಎಲ್ಲ ವಾರ್ಡುಗಳಿಗೂ ದಿನದ 24 ಗಂಟೆಯೂ ನೀರು ಸರಬರಾಜು ಮಾಡಲು 22.50 ಕೋಟಿ ಮೊತ್ತದ ಯೋಜನೆಗೆ ಅನಮೋದನೆ ಲಭಿಸಿದೆ. ಸದರಿ ಕಾಮಗಾರಿಯು ಮುಂದಿನ ಸಾಲಿನಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಸಭೆಯಲ್ಲಿ ಪುರಸಭೆಯ ಯೋಜನಾಧಿಕಾರಿ ಆರ್. ಮಂಜುನಾಥ್, ಲೆಕ್ಕ ಪರಿಶೋಧಕ ಟಿ.ಎಸ್. ನಿತಿನ್, ಚಕ್ರವರ್ತಿ ಇದ್ದರು.