ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂತರ ಶಾಲಾ ವಿಜ್ಞಾನ ವಸ್ತುಪ್ರದರ್ಶನ

Srinivasa Murthy VN
Updated On : 3 Mar 2014, 11:59 am

ನಂಜನಗೂಡು: ಜುಬಿಲೆಂಟ್ ಭಾರತೀಯ ಫೌಂಡೇಷನ್ ಸಹಯೋಗದೊಂದಿಗೆ ತಾಲೂಕಿನ ದೇಬೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಅಂತರ ಶಾಲಾ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಬಿಇಒ ಪುರುಷೋತ್ತಮ್ ಹಾಗೂ ಜುಬಿಲೆಂಟ್ ಭಾರತೀಯ ಫೌಂಡೇಷನ್ ಉಪಾಧ್ಯಕ್ಷ ಯೋಗಾಂಜನೇಯ ರೆಡ್ದಿ ಅವರು ಬಾಹ್ಯಾಕಾಶದ ಮಂಗಳ ಗ್ರಹಕ್ಕೆ ರಾಕೆಟ್ ಉಡಾವಣೆ ಮಾಡುವ ಮೂಲಕ ವಸ್ತುಪ್ರದರ್ಶನ ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅರ್ಪಣಾ ಮಾತನಾಡಿ, ಇಂದಿನ ಮಕ್ಕಳು ತುಂಬಾ ಚೂಟಿಯಾಗಿ, ಶಿಕ್ಷಣ ಗ್ರಹಿಕೆಯಲ್ಲಿ ಬುದ್ಧಿ ಉಪಯೋಗಿಸಿ ವಿಶೇಷ ಮಾದರಿಗಳನ್ನು ತಯಾರಿಸಿದ್ದಾರೆ. ಹೆಸರಾಂತ ವಿಜ್ಞಾನಿಗಳ ಅನ್ವೇಷಣೆಗಳನ್ನು ನೆನಪು ಮಾಡುವಂತೆ ವಸ್ತು ಪ್ರದರ್ಶನವಿದೆ ಎಂದರು. ಇದೇ ವೇಳೆ ಜುಬಿಲೆಂಟ್ ಭಾರತೀಯ ಫೌಂಡೇಶನ್ ಸಂಸ್ಥೆಯು ತಾಲೂಕಿನ 10 ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು, ಅವುಗಳ ನಿರ್ವಹಣೆಗೆ ಸಮಿತಿ ರಚಿಸಿ ಮುಗಳ್ನಗು ಎಂದು ನಾಮಕರಣ ಮಾಡಿತು. ಸರ್ಕಾರದ ಯೋಜನೆಗಳ ಜತೆಯಲ್ಲಿ 10 ಶಾಲೆಗಳಿಗೆ ಬೇಕಾದ ಸವಲತ್ತು, ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕ್ರೀಡಾ ಸಾಮಗ್ರಿ ಒದಗಿಸುವುದಾಗಿ ತಿಳಿಸಲಾಯಿತು. 300 ತಟ್ಟೆ ಲೋಟಗಳನ್ನು ವಿತರಿಸಲಾಯಿತು. ಸಂಸ್ಥೆಯ ರೋನಾಲ್ಡ್, ಶ್ರೀನಿವಾಸ್ ಶಾಖಾಪುರ್, ರವಿ, ದೀಪಕ್, ಭಾರತಿ, ಮುಖ್ಯ ಶಿಕ್ಷಕ ಅಂಕಯ್ಯ, ಆನಂದ್, ಕೇಷವಮೂರ್ತಿ, ಗಿರೀಶ್, ರಂಗನಾಥ್ ಇದ್ದರು.

ಇಂದು ತೋಪಮ್ಮ ಜಾತ್ರೆ
ಕೆ.ಆರ್. ನಗರ: ಪಟ್ಟಣದ ಹೊರವಲಯದ ಹಾಸನ- ಮೈಸೂರು ರಸ್ತೆಯಲ್ಲಿ ಪ್ರೇಮಿಗಳ ದೇವತೆ ಎಂದೇ ಹೆಸರುವಾಸಿಯಾಗಿರುವ ಆದಿಶಕ್ತಿ ತೋಪಮ್ಮನವರ ಜಾತ್ರಾ ಮಹೋತ್ಸವ ಮತ್ತು ದನಗಳ ಜಾತ್ರೆ ಮಾ.4ರಂದು ನಡೆಯಲಿದೆ. ಜಾತ್ರೆಯಲ್ಲಿ ರಥೋತ್ಸವ ನಡೆಯದಿರುವುದು ವಿಶೇಷವಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ಜಾತ್ರೆಗೆ ಬರುವ ಭಕ್ತರು ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಲಿದ್ದಾರೆ. ದೇವಸ್ಥಾನ ಪಟ್ಟಣದ ಸುತ್ತಲಿನ 9 ಗ್ರಾಮಗಳಿಗೆ ಸೇರಿದ್ದು, ಗ್ರಾಮಗಳ ಮುಖಂಡರು ಮತ್ತು ಸಾರ್ವಜನಿಕರು ಜಾತ್ರೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಮರದ ವ್ಯಾಪಾರಿಗಳ ಸಂಘದ ವತಿಯಿಂದ ಜಾತ್ರೆಗೆ ಬರುವ ಎಲ್ಲ ಭಕ್ತರಿಗೆ ಪ್ರಸಾದ, ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರೇಮಿಗಳು ಪ್ರಾರ್ಥನೆ ಸಲ್ಲಿಸಿದರೆ ತಮ್ಮ ಪ್ರೇಮ ಸಂಬಂಧ ಯಶಸ್ವಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈಗ ಜಾತ್ರೆ ನಡೆಯುವ ವೇಳೆಯಲ್ಲಿ ದನಗಳ ಜಾತ್ರೆಯನ್ನು ದೇವಾಲಯದ ಟ್ರಸ್ಟ್ ನಡೆಸಿಕೊಂಡು ಬರುತ್ತಿದ್ದು, ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement