ಕ್ರೀಡೆ ಗುಣಮಟ್ಟ ಹೆಚ್ಚಬೇಕು
ಕ.ಪ್ರ.ವಾರ್ತೆ ಮೈಸೂರು ಮಾ. 3
ದೇಶದಲ್ಲಿ ಕ್ರೀಡೆಯ ಗುಣಮಟ್ಟ ಹೆಚ್ಚಾಗಬೇಕಿದೆ ಎಂದು ಧ್ಯಾನ್ಚಂದ್ ಪ್ರಶಸ್ತಿ ಪುರಸ್ಕೃತ ಅಥ್ಲೆಟಿಕ್ಸ್ ಉದಯ್ ಕೆ. ಪ್ರಭು ಹೇಳಿದರು. ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿವಿ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಕಾಲೇಜಿನಲ್ಲಿ ಪದವಿ ಕಾಲೇಜು, ವಿವಿ ಸಹಾಯಕ ಪ್ರಾಧ್ಯಾಪಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಿಗಾಗಿ ಆಯೋಜಿಸಲಾಗಿರುವ 8ನೇ ದೈಹಿಕ ಶಿಕ್ಷಣ ಪುನಶ್ಚೇತನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೈಹಿಕ ಶಿಕ್ಷಣದಲ್ಲಿ ಪ್ರಸ್ತುತ ಸಾಕಷ್ಟು ಬದಲಾವಣೆ ಆಗಿದೆ. ದೈಹಿಕ ಶಿಕ್ಷಣ ಒದಗಿಸಲು ಅಗತ್ಯ ಮೂಲಭೂತ ಸೌಲಭ್ಯ ಈಗ ಲಭ್ಯವಿದೆ. ಆದರೆ, ನಮ್ಮವರಲ್ಲಿನ ಸ್ಫೂರ್ತಿ ಕಡಿಮೆ ಆಗಿದೆ. ಅಭಿವೃದ್ಧಿ, ಸೌಲಭ್ಯದ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ಸಂಕಷ್ಟಕರ ಪರಿಸ್ಥಿತಿ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕ್ರೀಡಾಕೂಟಗಳಲ್ಲಿ ಭಾಗವಹಿಸಲು ದೇಶದ ಜನಸಂಖ್ಯೆ ಮುಖ್ಯವಲ್ಲ. ಇರುವ ಸೌಲಭ್ಯಗಳನ್ನು ಬಳಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯ. 3 ದಶಕಗಳ ಹಿಂದೆ ದೈಹಿಕ ಶಿಕ್ಷಣದಲ್ಲಿ 100 ಮಂದಿ ಮಾತ್ರ ಡಾಕ್ಟರೇಟ್ ಪಡೆದಿದ್ದರು. ಆದರೆ, ಕಳೆದ 1 ದಶಕದಲ್ಲಿ ಡಾಕ್ಟರೇಟ್ ಪಡೆದವರ ಸಂಖ್ಯೆಯು ಮಿಲಿಯನ್ ಆಗಿದೆ. ಇದನ್ನು ಗಮವಿಸಿದರೇ ನಾವು ದೈಹಿಕ ಶಿಕ್ಷಣದಲ್ಲಿ ಹಿಂದಿಲ್ಲ. ಆದರೆ, ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದಿದ್ದೇವೆ ಎಂದರು.
ಮಿಲ್ಕಾ ಸಿಂಗ್ ಅವರು ಒಲಂಪಿಕ್ಸ್ನಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಮಿಲ್ಕಾ ಸಿಂಗ್ ಕುರಿತು ಚಲನಚಿತ್ರ ಸಹ ಬಂದಿದೆ. ಆದರೆ, ಆ ಚಿತ್ರದಲ್ಲಿ ಸಾಕಷ್ಟು ಸಂಗತಿಗಳು ಹೇಳಿಲ್ಲ. ಪಿ.ಟಿ. ಉಷಾ ಅವರಂತಹ ಪ್ರತಿಭೆಯು ನಮ್ಮಲ್ಲೇ ಇದ್ದಾರೆ. ಹೀಗಾಗಿ, ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅವುಗಳನ್ನು ಹುಡುಕಿ ಹೊರತರಬೇಕಿದೆ ಎಂದು ಅವರು ಹೇಳಿದರು.
ದೇಶದ ಪರವಾಗಿ 2 ಬಾರಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೇನೆ. 3ನೇ ಬಾರಿ ಭಾಗವಹಿಸಲು ಆಯ್ಕೆಯಾದರೂ ಮತ್ತೊಂದು ರಾಜ್ಯದ ಕ್ರೀಡಾಪಟುವಿನಿಂದ ಆ ಅವಕಾಶ ಕೈತಪ್ಪಿತು ಎಂದರು.
ತಂತ್ರಜ್ಞಾನ ಉಪಯೋಗಿಸಿ: ಶಿಬಿರ ಉದ್ಘಾಟಿಸಿದ ಅಣ್ಣಾಮಲೈ ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಜಿ. ರವೀಂದ್ರನ್ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಪ್ರಸ್ತುತ ಸಾಕಷ್ಟು ತಂತ್ರಜ್ಞಾನ ಬಂದಿದೆ. ಇದನ್ನು ಉಪಯೋಗಿಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಕಾಲೇಜು ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ತಿರುಮಲೈ ಗೋಪಾಲನ್, ಶಿಬಿರದ ಸಂಯೋಜಕ ಡಾ.ಸಿ. ವೆಂಕಟೇಶ್ ಇದ್ದರು. ಡಾ.ಎಸ್. ಮರಿ ಅಳಗನ್ ಸ್ವಾಗತಿಸಿದರು. ಡಾ. ನಂಜುಂಡಸ್ವಾಮಿ ನಿರೂಪಿಸಿದರು.