ಪುಟ್ಟರಾಜ ಗವಾಯಿಗೆ ಸಂಗೀತಾರ್ಪಣೆ
ಮೈಸೂರು: ಹಿಂದುಸ್ತಾನಿ ಸಂಗೀತ ವಿದ್ವಾಂಸ ಪದ್ಮಭೂಷಣ ಪಂಡಿತ್ ಡಾ. ಪುಟ್ಟರಾಜ ಗವಾಯಿಗಳವರ ಜನ್ಮ ಶತಮಾನೋತ್ಸವವು ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಸೋಮವಾರ ನಡೆಯಿತು.
ಸ್ವರ ಸಂಕುಲ ಹಿಂದುಸ್ತಾನಿ ಸಂಗೀತ ವಿದ್ಯಾಲಯ ಹಾಗೂ ಡಾ. ಪುಟ್ಟರಾಜ ಗವಾಯಿಗಳ ಶಿಷ್ಯ ಬಳಗದ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ರಂಗಾಯಣದ ನಿರ್ದೇಶಕ ಎಚ್. ಜನಾರ್ದನ್ ಉದ್ಘಾಟಿಸಿ, ಪಂಡಿತ್ ಪುಟ್ಟರಾಜ ಗವಾಯಿಗಳವರ ಸಂಗೀತ ಸಾಧನೆ ಹಾಗೂ ಕೊಡುಗೆಯ ಗುಣಗಾನ ಮಾಡಿದರು.
ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಬಿ. ಸೋಮಶೇಖರ್ ಮುಖ್ಯ ಅತಿಥಿಗಳಾಗಿದ್ದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಂ. ಬಸವರಾಜು ಹೆಡಿಗೊಂಡ ಅವರು ಶಹನಾಯ್ ವಾದನವನ್ನೂ, ಹರೀಶ್ ಹೆಗಡೆ ಹಿಂದುಸ್ತಾನಿ ಗಾಯನವನ್ನೂ, ಸಮೀರರಾವ್ ಕೊಳಲು ವಾದನವನ್ನೂ, ಉಸ್ತಾದ್ ನಿಸಾರ್ ಅಹಮದ್ ತಬಲಾ ವಾದನವನ್ನೂ ಹಾಗೂ ನಾಗಭೂಷಣ ಹೆಗಡೆ ಹಿಂದುಸ್ತಾನಿ ಗಾಯನವನ್ನೂ ನಡೆಸಿಕೊಟ್ಟರು.
ಪಕ್ಕವಾದ್ಯದಲ್ಲಿ ತಬಲಾ ರಮೇಶ್ ಧನ್ನೂರ, ಎಂ. ಗಣೇಶ್, ಮಿಲಿಂದ, ಹಾರ್ಮೋನಿಯಂ ಜುಮ್ಮನಗೌಡ ಪಾಟೇಲ ಹಾಗೂ ಪ್ರಭಾರಾವ್ ನುಡಿಸಿದರು.
ಮಧ್ಯಾಹ್ನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ರಾಘವೇಂದ್ರ ಆಚಾರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ, ಪಂಡಿತ್ ಕೈವಲ್ಯ ಕುಮಾರ ಗುರವ ಹಿಂದುಸ್ತಾನಿ ಗಾಯನವನ್ನೂ ಹಾಗೂ ಪೂಜಾರಾವ್ ಮಾಂಡೋಲಿನ್ ವಾದನವನ್ನೂ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಎಚ್.ಎಲ್. ಶಿವಶಂಕರಸ್ವಾಮಿ ಮೃದಂಗ, ಸಿ.ಎಸ್.ತ್ಯಾಗರಾಜನ್ ಪೀಟಿಲು, ಸತೀಶ ಕೊಳ್ಳಿ ಹಾರ್ಮೋನಿಯಂ, ಶ್ರೀಧರ ಮಾಂಡ್ರೆ ಹಾಗೂ ನಿಸಾರ್ ಅಹಮದ್ ತಬಲಾ ನುಡಿಸಿ ಸಾಥ್ ನೀಡಿದರು.