ಮೂಲ ವಿಜ್ಞಾನ, ವಿಜ್ಞಾನ ನಡುವೆ ತಾರತಮ್ಯ: ಭೂಪತಿ
ಮೈಸೂರು: ಮೂಲ ವಿಜ್ಞಾನ ಮತ್ತು ವಿಜ್ಞಾನದ ನಡುವೆ ನಾವು ತಾರತಮ್ಯ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಡಾ. ವಸುಂಧರ ಭೂಪತಿ ವಿಷಾದಿಸಿದರು.
ಮೈಸೂರು ವಿವಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಮೈಸೂರು ಜಿಲ್ಲಾ ಸಮಿತಿಯು ಸಂಯುಕ್ತವಾಗಿ ಮಾನಸಗಂಗೋತ್ರಿ ಸೂಕ್ಷ್ಮಜೀವಶಾಸ್ತ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತರ ವಿವಿ ಮಟ್ಟದ ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಧ್ಯಮಗಳಲ್ಲಿ ಲೈಂಗಿಕ ಅತ್ಯಾಚಾರ, ದರೋಡೆ ಪ್ರಕರಣ, ಸಿನೆಮಾ ಹೀಗೆ ಮನೆರಂಜನೆ ವಿಷಯಗಳಿಗೆ ಪ್ರಮುಖ ಆದ್ಯತೆ ನೀಡಿ ಸುದ್ದಿ ಪ್ರಕಟಿಸಲಾಗುತ್ತಿದೆ. ಅದೇ ವಿಜ್ಞಾನದಲ್ಲಿ ಆವಿಷ್ಕಾರವೇನಾದರೂ ನಡೆಸಿದರೆ ಪತ್ರಿಕೆಯ ಯಾವುದೋ ಮೂಲೆಯಲ್ಲಿ ಜಾಗ ನೀಡುತ್ತಾರೆ. ಮಹತ್ಕಾರ್ಯ ನಡೆದರೂ ಜನರಿಗೆ ತಲುಪದಿರುವುದು ವಿಪರ್ಯಾಸದ ಸಂಗತಿ ಎಂದರು.
ರಾಜ್ಯ ವಿಜ್ಞಾನ ಪರಿಷತ್ತು ಅಧ್ಯಕ್ಷ ಪ್ರೊ.ಎಸ್.ವಿ. ಸಂಕನೂರು, ಡಾ.ಬಿ.ಎಂ. ವೆಂಕಟೇಶ್, ನಿರ್ದೇಶಕ ನಾಗೇಶ್ ಅರಳಕುಪ್ಪೆ, ಉಪಾಧ್ಯಕ್ಷ ಚಳ್ಳಕೆರೆ ಯರ್ರೀಸ್ವಾಮಿ, ಮೈಸೂರು ವಿವಿ ಗಣಕ ಕೇಂದ್ರ ಡಾ.ಅ.ಮೈ. ಸುಧಾಕರ, ಸಿ. ಕೃಷ್ಣೇಗೌಡ ಇದ್ದರು.
ಮೈಕ್ರೋಬಯಾಲಜಿ ವಿಭಾಗದಲ್ಲಿ ಎರಡು ದಿನದಿಂದ ನಡೆದ ಅಂತರ ವಿವಿ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯಲ್ಲಿ ರಾಜ್ಯದ 11 ವಿವಿಗಳಿಂದ 22 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೀವ ವಿಜ್ಞಾನ ವಿಭಾಗದಲ್ಲಿ ಮೈಸೂರು ವಿವಿ, ಶಾರದಾವಿಲಾಸ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ ಬಿ. ಪ್ರಜ್ವಲ್ (ಪ್ರಥಮ), ಶಿವಮೊಗ್ಗ ವಿವಿ ಡಿವಿಎಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಜಿ.ಆರ್. ಅಕ್ಷತಾ (ದ್ವಿತೀಯ), ಭೌತವಿಜ್ಞಾನ ವಿಭಾಗದಲ್ಲಿ ಬೆಂಗಳೂರು ವಿವಿಯ ಮಹಾರಾಣಿ ವಿಜ್ಞಾನ ಪದವಿ ಕಾಲೇಜಿನ ಲಿಖಿತ (ಪ್ರಥಮ), ಮೈಸೂರು ವಿವಿ ಶಾರದಾ ವಿಲಾಸ ಕಾಲೇಜಿನ ಪಿ. ಕಿರಣ (ದ್ವಿತೀಯ) ಬಹುಮಾನ ಪಡೆದರು.
ಇಪ್ಟಾ ಕ್ರಿಕೆಟ್ ಪಂದ್ಯಾವಳಿ
ಮೈಸೂರು: ಭಾರತೀಯ ಜನಕಲಾ ಸಮಿತಿಯು (ಇಪ್ಟಾ) ಕಾರ್ಮಿಕ ಕಲ್ಯಾಣ ಮಂಡಳಿಯ ಸಹಯೋಗದೊಂದಿಗೆ ಕಾರ್ಮಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಮಿಕರು ಹಗಾಗೂ ಕುಟುಂಬ ವರ್ಗದವರಿಗೆ ಕ್ರೀಡಾಕೂಟ ಆಯೋಜಿಸಿದೆ. ಕ್ರೀಡಾಕೂಟದ ಅಂಗವಾಗಿ ಭಾನುವಾರ ಪುರುಷರಿಗಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲಾ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ ಮೈಸೂರಿನ 35ಕ್ಕೂ ಹೆಚ್ಚು ಕಾರ್ಖಾನೆಗಳ ಕಾರ್ಮಿಕರ ತಂಡಗಳು ಭಾಗವಹಿಸಿದ್ದವು. ಎಐಟಿಯುಸಿ ಜಿಲ್ಲಾಧ್ಯಕ್ಷ ರಾಜು, ಮೈಸೂರು ಪಾಲಿಮರ್ಸ್ ಲಿ.ನ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಭಾಗವಹಿಸಿದ್ದರು.