ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಾಡ್ಜ್ ಮ್ಯಾನ್‌ಹೋಲ್‌ಗೆ ಇಳಿದ ಪೌರಕಾರ್ಮಿಕ ಸಾವು: ಇಬ್ಬರ ಸೆರೆ

Srinivasa Murthy VN
Updated On : 3 Mar 2014, 11:55 am

ಕ.ಪ್ರ.ವಾರ್ತೆ  ಮೈಸೂರು ಮಾ. 3
ಲಾಡ್ಜ್‌ವೊಂದರ ಶೌಚಾಲಯವು ಕಟ್ಟಿಕೊಂಡಿದ್ದರಿಂದ ಒಳಚರಂಡಿ ಶುಚಿಗೊಳಿಸಲು ಮ್ಯಾನ್‌ಹೋಲ್‌ಗೆ ಇಳಿದ ಪೌರಕಾರ್ಮಿಕ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಜಗನ್ಮೋಹನ ಅರಮನೆ ಬಳಿ ಭಾನುವಾರ ನಡೆದಿದೆ.
ಮೈಸೂರಿನ ವಿಶ್ವೇಶ್ವರನಗರ 2ನೇ ಹಂತ ಡಿ. ದೇವರಾಜ ಅರಸು ಕಾಲೋನಿಯ ನಿವಾಸಿ ಸುಬ್ರಹ್ಮಣ್ಯ ಎಂಬವರ ಪುತ್ರ ಕುಮಾರ(29) ಮೃತಪಟ್ಟವರು. ಶೌಚಾಲಯ ಕಟ್ಟಿಕೊಂಡಿದ್ದರಿಂದ ಕಲ್ಪನಾ ಲಾಡ್ಜ್‌ನ ಸಮೀಪದಲ್ಲಿದ್ದ 8 ಅಡಿ ಆಳವಿರುವ ಮ್ಯಾನ್‌ಹೋಲ್‌ಗೆ ಕುಮಾರ ಏಣಿ ಹಾಕಿ ಇಳಿದು, ಕೋಲಿನ ಸಹಾಯದಿಂದ ಶೌಚಾಲಯದ ಕೊಳವೆಯನ್ನು ತಿವಿದಿದ್ದಾರೆ. ಆ ವೇಳೆ ಕೊಳವೆಯಿಂದ ಏಕಾಏಕಿ ನೀರು ನುಗ್ಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಪೌರಕಾರ್ಮಿಕ ಕಾಯ್ದೆ ಹಾಗೂ ಕಾರ್ಮಿಕರ ಬಗೆಗೆ ಉದಾಸೀನ ತೋರಿದ್ದರಿಂದ ಐಪಿಸಿ 304 ಅಡಿಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಬಂಧನ: ಇದೇ ವೇಳೆ, ಕಲ್ಪನಾ ಲಾಡ್ಜ್‌ನ ವ್ಯವಸ್ಥಾಪಕ ಸೇರಿದಂತೆ ಇಬ್ಬರನ್ನು ದೇವರಾಜ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಲಾಡ್ಜ್‌ನ ವ್ಯವಸ್ಥಾಪಕ ಬಂಗಾರಪ್ಪ ಮತ್ತು ಅವರ ಅಳಿಯ ನಾಗರಾಜ ಬಂಧಿತ ಆರೋಪಿಗಳು. ಲಾಡ್ಜ್‌ನ ಮಾಲೀಕ ಶ್ರೀಧರ್ ಎಂಬವರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಕಾಗಲವಾಡಿ ಶಿವಣ್ಣ ಭೇಟಿ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕಾಗಲವಾಡಿ ಎಂ. ಶಿವಣ್ಣ ಅವರು ಘಟನಾ ಸ್ಥಳ ಹಾಗೂ ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರಿನಲ್ಲಿ ಮಲಹೊರುವ ಪದ್ಧತಿ ಜೀವಂತವಾಗಿರುವುದು ನಿಜ. ನಗರದಲ್ಲಿರುವ ಪೌರಕಾರ್ಮಿಕರ ಕುರಿತು ಪುನರ್ ಸಮೀಕ್ಷೆ ಮಾಡಿಸಲು ಸೂಚಿಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಪಾಲಿಕೆಯಿಂದ 3 ಲಕ್ಷ ಪರಿಹಾರ: ಮೈಸೂರು ನಗರಪಾಲಿಕೆ ಪೌರಕಾರ್ಮಿಕರ ಸಂಘದವರು ಮೃತನ ಕುಟುಂಬಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿ ಕಲ್ಪನಾ ಲಾಡ್ಜ್ ಎದುರು ಶವವಿಟ್ಟು ಪ್ರತಿಭಟಿಸಲು ಮುಂದಾದರು. ಇವರನ್ನು ಕಾಗಲವಾಡಿ ಶಿವಣ್ಣ ತಡೆದು, ಪಾಲಿಕೆಯಿಂದ 3 ಲಕ್ಷ ಹಾಗೂ ಲಾಡ್ಜ್ ಮಾಲೀಕರಿಂದಲೂ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು  ಪ್ರತಿಭಟನೆ ಹಿಂಪಡೆದರು. ಇದೇ ವೇಳೆ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿಯಿದ್ದ ಮೃತ ಪೌರಕಾರ್ಮಿಕ ಕುಮಾರ ಕುಟುಂಬಕ್ಕೆ ನಗರಪಾಲಿಕೆ ವತಿಯಿಂದ 3 ಲಕ್ಷ ಪರಿಹಾರದ ಚೆಕ್ ಅನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕಾಗಲವಾಡಿ ಎಂ. ಶಿವಣ್ಣ ವಿತರಿಸಿದರು.

300ಕ್ಕೆ ಜೀವ ಕಳೆದುಕೊಂಡ!
ಕಲ್ಪನಾ ಲಾಡ್ಜ್ ಮತ್ತು ಇತರೆ ಕಡೆಗಳಲ್ಲಿ ಕಸಗೂಡಿಸುವ ಕೆಲಸ ಮಾಡಿಕೊಂಡಿದ್ದೆ. ಲಾಡ್ಜ್‌ನ ಎಲ್ಲ ಶೌಚಾಲಯದ ಪೈಪ್ ಬಂದೆಡೆ ಸೇರಿ ಅಲ್ಲಿಂದ ಒಳಚರಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದನ್ನು ಸರಿಪಡಿಸಲು ಮ್ಯಾನ್‌ಹೋಲ್‌ಗೆ ಇಳಿಯಬೇಕಾಯಿತು. ಲಾಡ್ಜ್‌ನ ವ್ಯವಸ್ಥಾಪಕ ಬಂಗಾರಪ್ಪ ಅವರು 300 ಆಸೆ ತೋರಿಸಿದ್ದರಿಂದ ಮಗನೊಂದಿಗೆ ಶೌಚಾಲಯ ಸರಿಪಡಿಸಲು ನನ್ನ ಮಗ ಕುಮಾರನನ್ನು ಕರೆಸಿದೆ ಎಂದು ಕುಮಾರ್ ತಂದೆ ಕಣ್ಣೀರಿಡುತ್ತಾ ಸುಬ್ರಹ್ಮಣ್ಯ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement