ವಕೀಲರಿಗೆ ಶ್ರದ್ಧಾಂಜಲಿ
ನಂಜನಗೂಡು: ಇತ್ತೀಚೆಗೆ ನಿಧನರಾದ ಹಿರಿಯ ವಕೀಲರಾದ ಮಾಧವಶಾಸ್ತ್ರಿ, ದ್ವಾರಕನಾಥ್, ಗುರುಸ್ವಾಮಿ ಅವರಿಗೆ ತಾ. ವಕೀಲರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹಿರಿಯ ವಕೀಲ ಮುನಿಸುವ್ರತ ಮಾತನಾಡಿ, ಮಾಧವಶಾಸ್ತ್ರಿ ಬಿಟ್ಟು ಹೋಗಿರುವುದರಿಂದ ಒಬ್ಬ ಆತ್ಮಬಂಧುವನ್ನು ಕಳೆದುಕೊಂಡಿದ್ದೇನೆ. ಕೇಸುಗಳನ್ನು ತೆಗೆದುಕೊಳ್ಳುವಾಗ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಇನ್ನು ದ್ವಾರಕಾನಾಥ್ ಅವರು ತುಂಬಾ ಅನುಭವಿಗಳು. ಅವರು ಹೆಚ್ಚು ಕ್ರಿಮಿನಲ್ ಕೇಸುಗಳಲ್ಲಿ ವಾದಿಸುವಾಗ, ಬೇರೆ ಕಲಿಕಾ ವಕೀಲರು ಅವರ ಕೈಬಾಯಿಗಳನ್ನು ನೋಡುತ್ತಾ ಬಿಟ್ಟ ಕಣ್ಣು ಬಿಟ್ಟ ಹಾಗೆ ಕೂರುತ್ತಿದ್ದರು. ಗುರುಸ್ವಾಮಿ ಕೂಡ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದರು ಎಂದರು. ಹಿರಿಯ ವಕೀಲ ಜಯದೇವಪ್ಪ, ಕೋಲಾರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ರೇಣುಕ ಪ್ರಸಾದ್ ಮಾತನಾಡಿದರು. ಜಿಲ್ಲಾ ವಕೀಲ ಪರಿಷತ್ ಸದಸ್ಯ ಅಪ್ಪಾಜಿಗೌಡ, ಹಿರಿಯ ಸಿವಿಲ್ ನ್ಯಾ. ಮಂಜುನಾಥ್, ಹಿರಿಯ ಸಿವಿಲ್ ನ್ಯಾ. ದೇವೆಂದ್ರ ಪಂಡಿತ್, ನ್ಯಾ. ಶಾರದಾ ಸಿ. ಹಟ್ಟಿ, ವಕೀಲ ಸಂಘದ ಅಧ್ಯಕ್ಷ ಮಹೇಶ್ ಬಾಬು, ತಾರಕಾರಾಮ್, ಹಿರಿಯ ವಕೀಲ ಸೇತುರಾವ್, ಮುರಳಿ, ನಾಗೇಂದ್ರ, ಸುರೇಶ್, ಮಹೇಶ್,ಪದ್ಮ, ಬಿ. ಚಂದ್ರ ಜೈನ್, ಹಿರಿಯ ವಕೀಲ ಬಿ. ಮಹದೇವಪ್ಪ, ವೃಷಬೇಂದ್ರಸ್ವಾಮಿ, ಶ್ರೀಕಂಠಪ್ರಸಾದ್ ಇದ್ದರು.
ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ
ಭೇರ್ಯ: ಭೇರ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ 36 ವರ್ಷಗಳ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟೇಶ್ ಅವರಿಗೆ ಸೋಮವಾರ ಸಹೋದ್ಯೋಗಿಗಳು ಬೀಳ್ಕೊಡುಗೆ ನೀಡಿದರು.
ಸಹಶಿಕ್ಷಕರೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತಂದ ಕೀರ್ತಿಗೆ ವೆಂಕಟೇಶ್ ಪಾತ್ರರಾಗಿದ್ದರು. ಇವರೊಂದಿಗೆ ಹೊಂದಿದ್ದ ಒಡನಾಟವನ್ನು ಸಹ ಶಿಕ್ಷಕರು ಸ್ಮರಿಸುತ್ತ ಒಂದು ಕ್ಷಣ ಭಾವುಕರಾದರು. ಸಹಶಿಕ್ಷಕಿ ವನಿತ ಮಾತನಾಡಿ, ಇವರ ಅವಧಿಯಲ್ಲಿ ಶಾಲಾಭಿವೃದ್ಧಿಗೆ ಸ್ಪಂದಿಸಿ ಸರ್ಕಾರದ ಅನುದಾನವನ್ನು ಸಂಪೂರ್ಣವಾಗಿ ಬಳಸುತ್ತ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನಡೆಸಿದ್ದರು ಎಂದರು. ಎಸ್ಡಿಎಂಸಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ತಾಸಿನಬೇಗಂ, ಸಿಆರ್ಪಿ ಶಂಕರೇಗೌಡ, ಸಹಶಿಕ್ಷಕರಾದ ಪುಷ್ಪಲತಾ, ವನಿತಾ, ಸುಮಾಮಣಿ, ಮಂಜುಳಾಂಭ, ಶೃತಿ, ಕಿರಣ್, ಗೋಪಿಕಾಂಭ, ಪವಿತ್ರ, ಅಡಿಗೆ ಸಹಾಯಕರಾದ ಭಾಗ್ಯಮ್ಮ, ಚಂದ್ರಮ್ಮ, ಶಾರದಮ್ಮ ಇದ್ದರು.
ಗಣಪತಿ ಹೋಲುವ ಟೊಮೆಟೊ
ಸಾಲಿಗ್ರಾಮ: ಗಣಪತಿ ಮುಖ ಹೋಲಿಕೆ ಇರುವ ಅಪರೂಪದ ಟೊಮೆಟೋ ಹಣ್ಣು ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಕಂಡುಬಂದಿದೆ. ಸಾಲಿಗ್ರಾಮದ ನಿವಾಸಿ ಟೈಲರ್ ಕಾಂತರಾಜ್ ಮಾರುಕಟ್ಟೆಯಲ್ಲಿ ಖರೀದಿಸಿ ತಂದ ಟೊಮೆಟೋ ಹಣ್ಣುಗಳಲ್ಲಿ ಗಣಪತಿ ಆಕಾರದಲ್ಲಿರುವ ಟೊಮೇಟೋ ಪತ್ತೆಯಾಗಿದೆ. ಸಾಲಿಗ್ರಾಮ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಟೊಮೆಟೋ ಹಣ್ಣು ಒಂದರ ಮೇಲೊಂದು ಫಲ ಬಂದಿದ್ದು ಒಂದು ಹಣ್ಣು ಹೊಟ್ಟೆ ಆಕಾರದಲ್ಲಿ ಹಾಗೂ ಮತ್ತೊಂದು ಹಣ್ಣು ಗಣಪತಿ ಮುಖ ಹಾಗೂ ಸೊಂಡಿಲು ಆಕಾರದಲ್ಲಿದೆ.