ವಿದ್ಯಾರ್ಥಿಗಳ ಕುತೂಹಲ ತಣಿಸಿದ ವಿಜ್ಞಾನ ಉಪನ್ಯಾಸ
ಮೈಸೂರು: ಅಂತಾರಾಷ್ಟ್ರೀಯ ವಿಜ್ಞಾನ ದಿನಾಚರಣೆ ಡಿ. ಬನುಮಯ್ಯ ಬಾಲಕರ ಪ್ರೌಢಶಾಲೆಯಲ್ಲಿ ನಡೆಯಿತು. ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಮನ್ ಪರಿಣಾಮದ ಆವಿಷ್ಕಾರದಿಂದ ಮನುಕುಲಕ್ಕೆ ಆಗುತ್ತಿರುವ ಅನುಕೂಲಗಳು ಎಂಬ ವಿಷಯ ಕುರಿತು ಮಹಾರಾಜ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಸಂತೋಷ್ ಮಾತನಾಡಿ, ನೋಬಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಕೊಡುಗೆಗಳನ್ನು ತಿಳಿಸಿದರು. ಆಕಾಶವು ನೀಲಿಬಣ್ಣವೇಕೆ ಎಂಬ ವಿಷಯದ ಬಗ್ಗೆ ರಾಮನ್ ಪರಿಣಾಮದ ವ್ಯಾಖ್ಯಾನಗಳನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ ಅವರ ಕುತೂಹಲ ತಣಿಸಿದರು. ಸರ್. ಸಿ.ವಿ. ರಾಮನ್ ಕುರಿತು ಶಿಕ್ಷಕಿ ಶಾರದಾ ಮಾತನಾಡಿದರು. ವಿಜ್ಞಾನ ಶಿಕ್ಷಕ ಬೋರೇಗೌಡ, ಕನ್ನಡ ಶಿಕ್ಷಕ ಕೆ. ಕೃಷ್ಣೇಗೌಡ, ಎಸ್‌ಡಿಎಂಸಿ ಸದಸ್ಯ ಕೆ.ಎಂ. ಗೋವಿಂದರಾಜು ಇದ್ದರು.
ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
ಮೈಸೂರು: ನಗರದ ವಾರ್ಡ್ ನಂ. 18 ರಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಅನಿಕೇತನ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಕೆ. ಗಂಗಾಧರ ಗೌಡ ಎಚ್ಚರಿಸಿದ್ದಾರೆ. ಹುಡ್ಕೋ ಬಡಾವಣೆಗೆ ಕಾಂಕ್ರಿಟ್ ರಸ್ತೆ, ಮನುಜಪಥ ರಸ್ತೆ, ಅನಿಕೇತನ ರಸ್ತೆ 3ನೇ ಕ್ರಾಸ್‌ಗೆ ಡಾಂಬರೀಕರಣ ಮಾಡಲು ಒಂದು ವರ್ಷದ ಹಿಂದೆ ಟೆಂಡರ್ ನೀಡಲಾಗಿತ್ತು. ಟೆಂಡರ್ ಪಡೆದ ಗುತ್ತಿಗೆದಾರರು 2 ತಿಂಗಳ ಹಿಂದೆ ರಸ್ತೆ ಕಾಮಗಾರಿ ಆರಂಭಿಸುವುದಾಗಿ ರಸ್ತೆಗಳನ್ನು ಅಗೆದು ಕಾಮಗಾರಿ ನಿಲ್ಲಿಸಿ ಹೋಗಿದ್ದಾರೆ.
ಈ ಸಂಬಂಧ ವಲಯ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿ ಮತ್ತು ವಾರ್ಡ್‌ನ ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ರಸ್ತೆಯನ್ನು ಅಗೆದಿರುವುದರಿಂದ ಹಿರಿಯ ನಾಗರಿಕರು ಮತ್ತು ಮಕ್ಕಳು ಓಡಾಡಲು ತೊಂದರೆ ಆಗುತ್ತಿದೆ. ಈ ರಸ್ತೆಯಲ್ಲಿ ವಾಹನ ಸಂಚರಿಸುವುದರಿಂದ ಧೂಳು ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಆದ್ದರಿಂದ ಪಾಲಿಕೆ ಆಯುಕ್ತರು ಕೂಡಲೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಕೆ. ಗಂಗಾಧರ ಗೌಡ ಎಚ್ಚರಿಸಿದ್ದಾರೆ.