ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತ್ತೆ 'ಹಳಿ ತಪ್ಪಿದ' ಮೈಸೂರು- ಕುಶಾಲಗರ ರೈಲು

Srinivasa Murthy VN
Updated On : 5 Mar 2014, 12:26 pm

-ವಿಶೇಷ ವರದಿ
ಮಡಿಕೇರಿ:
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮೈಸೂರು- ಕುಶಾಲನಗರ ರೇಲ್ವೆ ಮಾರ್ಗದ ಕನಸು ಸದ್ಯಕ್ಕಂತೂ ನನಸಾಗುವಂತೆ ಕಾಣುತ್ತಿಲ್ಲ. 600 ಕೋಟಿ ವೆಚ್ಚದ ಈ ರೇಲ್ವೆ ಮಾರ್ಗ ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಸದ್ಯಕ್ಕೆ ರೇಲ್ವೆ ಇಲಾಖೆ ಈ ಮಾರ್ಗದ ಯೋಜನೆಯನ್ನು ಕೈ ಬಿಟ್ಟಿದೆ.
ಮೈಸೂರಿನಿಂದ ಕುಶಾಲನಗರಕ್ಕೆ ಹೊಸ ರೈಲು ಮಾರ್ಗ ಯೋಜನೆ ಸಂಬಂಧ 2011ರಲ್ಲಿ ರೇಲ್ವೆ ಇಲಾಖೆ ಸರ್ವೆ ಕಾರ್ಯ ಕೈಗೊಂಡಿತ್ತು. 4 ತಿಂಗಳ ಅವಧಿಯಲ್ಲಿ ಸರ್ವೆ ಮುಕ್ತಾಯಗೊಳಿಸಿದ ಇಲಾಖೆಯು 100 ಕಿ.ಮೀ. ಅಂತರದ ಈ ಮಾರ್ಗಕ್ಕೆ ಅಂದಾಜು 600 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಪಟ್ಟಿ ಸಲ್ಲಿಸಿತ್ತು. ಮೈಸೂರಿನಿಂದ ಕುಶಾಲನಗರಕ್ಕೆ 600 ಕೋಟಿ ವೆಚ್ಚ ಮಾಡಿ ರೈಲು ಮಾರ್ಗ ರೂಪಿಸಿದರೆ ಮೈಸೂರು- ಹುಣಸೂರು- ಬೈಲುಕುಪ್ಪೆ- ಕುಶಾಲನಗರ ಮಾರ್ಗದಿಂದ ಅಷ್ಟೊಂದು ಲಾಭ ತೆಗೆಯುವುದು ಕಷ್ಟಸಾಧ್ಯ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿತ್ತು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿಯೂ ಮೈಸೂರು- ಕುಶಾಲನಗರ ರೇಲ್ವೆ ಮಾರ್ಗದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ. ಹೀಗಿರುವಾಗ ಈ ಯೋಜನೆಯನ್ನು ಸದ್ಯಕ್ಕಂತೂ ಕೈಬಿಡಲಾಗಿದ್ದು, ಮುಂದಿನ ರೇಲ್ವೆ ಬಜೆಟ್‌ನಲ್ಲಿ ಪ್ರಸ್ತಾಪವಾದರೆ ಮಾತ್ರ ಈ ಯೋಜನೆಗೆ ಮತ್ತೆ ಜೀವ ಬರಲಿದೆ ಎಂದು ಮೂಲಗಳು ತಿಳಿಸಿವೆ.
ವರುಷಗಳ ಹಿಂದಿನ ಕನಸು: ಹಾಗೇ ನೋಡಿದರೆ 1881-82ರಲ್ಲಿಯೇ ಮೈಸೂರಿನಿಂದ ಮಡಿಕೇರಿಗೆ ರೈಲು ಮಾರ್ಗ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಬೇಕೆಂಬ ನಿರ್ಧಾರವಾಗಿತ್ತು. ಆದರೆ ಬೆಟ್ಟಗುಡ್ಡಗಳ ಮಧ್ಯೆ ರೈಲು ಮಾರ್ಗ ಕಷ್ಟಸಾಧ್ಯ ಎಂಬ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. 2008ರಲ್ಲಿಯೂ ಮೈಸೂರಿನಿಂದ ಕೆ.ಆರ್.ನಗರ ಮೂಲಕ ಕುಶಾಲನಗರಕ್ಕೆ ರೈಲು ಮಾರ್ಗದ ಬಗ್ಗೆ ಯೋಜನೆ ರೂಪಿಸಲ್ಪಟ್ಟು, ಇದು ಕೂಡ ಆರ್ಥಿಕವಾಗಿ ದುಬಾರಿ ಎಂಬ ಕಾರಣದಿಂದ ತಡೆಹಿಡಿಯಲ್ಪಟ್ಟಿತ್ತು. 2011ರ ರಾಜ್ಯ ಬಜೆಟ್‌ನಲ್ಲಿ ದೇಶದ ಪ್ರಸ್ತಾವಿತ ರೇಲ್ವೆ ಮಾರ್ಗ ಯೋಜನೆಗಳಲ್ಲಿ ಮೈಸೂರು- ಕುಶಾಲನಗರ ಯೋಜನೆಯನ್ನೂ ಪ್ರಸ್ತಾಪಿಸಲಾಗಿತ್ತು. ಆದರೆ, ನಂತರದ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯ ಪ್ರಸ್ತಾಪವೇ ಇರಲಿಲ್ಲ.
ಕೊಡಗಿನ ಕಾಫಿ ಸೇರಿದಂತೆ ಇತರ ವಾಣಿಜ್ಯ ಬೆಳೆಗಳಿಗೆ ನೆರವಾಗಬಲ್ಲ ರೇಲ್ವೆ ಮಾರ್ಗ ಕೊಡಗಿಗೆ ಬೇಕು ಎಂಬ ಕೂಗಿನ ಹಿನ್ನೆಲೆಯಲ್ಲಿಯೇ ಪರಿಸರ ಹಾಳಾದೀತು ಎಂಬ ಕೂಗು ಕೂಡ ಕೇಳಿಬಂದಿತ್ತು. ಸದ್ಯಕ್ಕಂತೂ ಮೈಸೂರಿನಿಂದ ಕುಶಾಲನಗರಕ್ಕೆ ರೇಲ್ವೆ ಮಾರ್ಗದ ಪ್ರಸ್ತಾಪವನ್ನೇ ಇಲಾಖೆ ಕೈಬಿಟ್ಟಿರುವುದರಿಂದ ಕೊಡಗಿಗೆ ಮಹತ್ವದ್ದಾಗಿದ್ದ ರೈಲು ಸಂಚಾರ ಯೋಜನೆಯೊಂದು ನೆನೆಗುದಿಗೆ ಬಿದ್ದಂತಾಗಿದೆ. ಕೊಡಗಿನ ಜನರರೈಲು ಪ್ರಯಾಣದ ಕನಸಿಗೆ ತಣ್ಣೀರು ಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement