ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಲೌಕಿಕ' ಟ್ರೇಲರ್ ಬಿಡುಗಡೆ

Srinivasa Murthy VN
Updated On : 5 Mar 2014, 12:27 pm

ಮೈಸೂರು: ಬ್ಲಾಕ್ ಟಿಕೆಟ್ ಬ್ಯಾನರ್‌ನಡಿ ಲೌಕಿಕ ಚಲನಚಿತ್ರ ನಿರ್ಮಿಸುತ್ತಿರುವುದಾಗಿ ಚಲನಚಿತ್ರದ ನಿರ್ದೇಶಕ ಮಹದೇವಸ್ವಾಮಿ ಹೇಳಿದರು. ಮೈಸೂರು, ಎಚ್.ಡಿ. ಕೋಟೆ ಮತ್ತು ವೀರಾಜಪೇಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮುಂದಿನ ಡಿಸೆಂಬರ್ ಅಂತ್ಯದೊಳಗೆ ಚಿತ್ರೀಕರಣ ಪೂರ್ಣಗೊಳಿಸುವ ವಿಶ್ವಾಸ ಇದೆ. ಸುಮಾರು 2 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾನೂ ಸೇರಿದಂತೆ ಮೂವರು ಸ್ನೇಹಿತರು ಸೇರಿ, ಹೊಸ ಮುಖಗಳೊಂದಿಗೆ ಈ ಚಿತ್ರ ನಿರ್ಮಿಸುತ್ತಿದ್ದೇವೆ. ಸದ್ಯದಲ್ಲಿಯೆ ಇದರ ಚಿತ್ರೀಕರಣಕ್ಕೆ ಮೂಹೂರ್ತದ ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದರು. ಶಾಸಕೆ ಚಿಕ್ಕಮಾದು ಶುಭ ಹಾರೈಸಿದರು. ಮಾಜಿ ಮೇಯರ್ ಸಂದೇಶ್ ಸ್ವಾಮಿ ಪೋಸ್ಟರ್ ಮತ್ತು ಚಲನಚಿತ್ರದ ಟ್ರೇಲರ್‌ನ್ನು ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿದರು. ರಂಜನ್ ಇದ್ದರು.

ಮೃಗಾಲಯದಲ್ಲಿ ಬೇಸಿಗೆ ಶಿಬಿರ
ಮೈಸೂರು:
ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ. 21ರಿಂದ ಮೇ 14ರವರೆಗೆ ವಿದ್ಯಾರ್ಥಿಗಳಿಗಾಗಿ ತಲಾ ಹತ್ತು ದಿನಗಳ ಅವಧಿಯ ಬೇಸಿಗೆ ಶಿಬಿರವನ್ನು ಎರಡು ತಂಡಗಳಲ್ಲಿ ಆಯೋಜಿಸಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹೇಳಿದ್ದಾರೆ. ಮೊದಲ ಬಂದವರಿಗೆ ಆದ್ಯತೆ ಮೇರೆಗೆ ನೋಂದಣಿ ಮಾಡಲಾಗುವುದು. ಶಿಬಿರದ ಸದಸ್ಯತ್ವ ಪಡೆಯಲು ಅಗತ್ಯವಿರುವ ಅರ್ಜಿಗಳನ್ನು ಮಾ.12ರಿಂದ ವಿತರಿಸಲಾಗುವುದು. 1ನೇ ತಂಡ- 6ನೇ ತರಗತಿಯಿಂದ ಮತ್ತು ಪದವಿ ಪೂರ್ವ ಶಿಕ್ಷಣದವರೆಗೆ ಪರೀಕ್ಷೆಗೆ ಅರ್ಹರಾದವರು ಏ. 21ರಿಂದ 30ರವರೆಗೆ 50 ವಿದ್ಯಾರ್ಥಿಗಳಿಗೆ. 2ನೇ ತಂಡ- 6ನೇ ತರಗತಿಯಿಂದ ಮತ್ತು ಪದವಿ ಪೂರ್ವ ಶಿಕ್ಷಣದವರೆಗೆ- ಪರೀಕ್ಷೆಗೆ ಅರ್ಹರಾದವರು ಮೇ 5ರಿಂದ 14ರವರೆಗೆ 50 ವಿದ್ಯಾರ್ಥಿಗಳಿಗೆ, ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ.
ಪ್ರಕೃತಿ ಮತ್ತು ವನ್ಯ ಪ್ರಾಣಿ ಸಂಕುಲಗಳ ಸಂರಕ್ಷಣೆ ಹಾಗೂ ಜೈವಿಕ ವೈವಿಧ್ಯತೆಗಳು ಈ ಶಿಬಿರದ ಮುಖ್ಯ ಅಂಶಗಳಾಗಿವೆ. ವಿದ್ಯಾರ್ಥಿಗಳಿಗೆ ಪ್ರಾಣಿಪಾಲಕರ ಜೊತೆ ಸಂವಾದ ನಡೆಸಲು ಅವಕಾಶ ನೀಡುವುದರ ಜೊತೆಗೆ ಅವರು ಪ್ರಾಣಿಮನೆಗಳನ್ನು ಶುಚಿಪಡಿಸುವುದು ಮತ್ತುಅದಕ್ಕೆ  ಆಹಾರ ನೀಡುವ ಅವಕಾಶವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ. 2523020, 2440752 ಸಂಪರ್ಕಿಸಬಹುದು.

ಎಸ್‌ಜೆಸಿಇ, ಎಂಐಟಿಗೆ ಜಯ
ಮೈಸೂರು:
ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಸ್‌ಜೆಸಿಇ ಕಾಲೇಜು ತಂಡವು, ಮರಿಮಲ್ಲಪ್ಪ ವಿಜ್ಞಾನ ಮತ್ತು ಬಿಬಿಎಂ ತಂಡದ ವಿರುದ್ಧ 107 ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ.
ಎಸ್‌ಜೆಸಿಇ ಮೈದಾನದಲ್ಲಿ ಕೆಎಸ್‌ಸಿಎ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ಎಸ್‌ಜೆಸಿಇ ತಂಡ 24.2 ಓವರ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ತಂಡದ ಪರ ಚಿರಂತ್ ಶಿವಕುಮಾರ್(43), ಪರೀಕ್ಷಿತ್(25) ಮತ್ತು ರೋಹಿತ್ ಮುತ್ತೂರ್ ಅಜೇಯ 37 ರನ್ ಗಳಿಸಿದರು. ಮರಿಮಲ್ಲಪ್ಪ ತಂಡದ ಚಿದಾನಂದ್ 48 ರನ್ ನೀಡಿ ಎಸ್‌ಜೆಸಿಇ ತಂಡದ ಐದು ವಿಕೆಟ್ ಕಬಳಿಸಿದರು. ಇದಕ್ಕೆ ಉತ್ತರವಾಗಿ ಮರಿಮಲ್ಲಪ್ಪ ತಂಡ 24.5 ಓವರ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 77 ರನ್ ಗಳಿಸಿತು. ತಂಡದ ಪರ ತಯೀಬ್(20) ರನ್ ಗಳಿಸಿದರು. ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಎಂಐಟಿ ತಂಡವು, ಕೂರ್ಗ ತಂಡದ ವಿರುದ್ಧ 108 ರನ್‌ಗಳ ಅಂತರದಲ್ಲಿ ಜಯಗಳಿಸಿತು. ಎಂಐಟಿ ತಂಡ 30.1 ಓವರ್‌ಗೆ 131 ರನ್ ಗಳಿಸಿದರೆ, ಕೂರ್ಗ್ ತಂಡ 13.3 ಓವರ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 23 ರನ್ ಗಳಿಸಿತು.

ಭೈರಾಪುರ ಗ್ರಾಪಂ ಅಧ್ಯಕ್ಷೆ ರಾಜಿನಾಮೆ
ಟಿ. ನರಸೀಪುರ:
ಪಂಚಾಯಿತಿ ಸದಸ್ಯರ ನಡುವೆ ಮಾಡಿಕೊಂಡ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಭೈರಾಪುರ ಗ್ರಾಪಂ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಹೇಳಿದರು. ಎರಡನೇ ಅವಧಿಗೆ ಲಭ್ಯವಾದ ಮೀಸಲಾತಿಯಿಂದ ತಾವು ಅಧ್ಯಕ್ಷರಾಗುವ ಅವಕಾಶವನ್ನು ಸದಸ್ಯರೆಲ್ಲರೂ ಕಲ್ಪಿಸಿಕೊಟ್ಟರು. ಅಧ್ಯಕ್ಷರ ಆಯ್ಕೆಯ ವೇಳೆ ನಿಗದಿತ ಅವಧಿವರೆಗೆ ಕಾರ್ಯ ನಿರ್ವಹಿಸಲು ಕೇಳಿದ್ದ ಕಾಲಾವಕಾಶ ಮುಗಿದಿರುವ ಹಿನ್ನೆಲೆಯಲ್ಲಿ ಬುಧವಾರ ರಾಜಿನಾಮೆ ನೀಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗ್ರಾಪಂ ಉಪಾಧ್ಯಕ್ಷ ಪುಟ್ಟು, ಸದಸ್ಯರಾದ ಎಂ. ಮಿಥುನ್, ಬಿ.ಎಲ್. ಮಹದೇವು, ಟಿ.ಎನ್. ಶಿವಕುಮಾರ್, ಮಾಜಿ ಅಧ್ಯಕ್ಷ ಬಿ. ವೀರಭದ್ರಪ್ಪ, ಎ.ಜೆ. ವೆಂಕಟೇಶ್, ಮುಖಂಡ ಸಿ.ಡಿ. ವೆಂಕಟೇಶ್ ಇದ್ದರು.

ಸುತ್ತೂರು ಸುತ್ತಮುತ್ತ ಮಳೆ
ಸುತ್ತೂರು:
ನಂಜನಗೂಡು ತಾಲೂಕಿನ ನಗರ್ಲೆ ಮತ್ತು ಬೆಳಗುಂದ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಿದ್ದ ಭಾರಿ ಮಳೆ ಗಾಳಿಗೆ ಮನೆಗಳು ಕುಸಿದು, ಮನೆ ಮೇಲೆ ಹಾಕಿದ್ದ ಚಾವಣಿ ಗಾಳಿಗೆ ಹಾರಿ ಹೋಗಿದೆ. ನಗರ್ಲೆ ಗ್ರಾಮದ ನಾಗಯ್ಯ ಎಂಬವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಬೆಳಗುಂದ ಗ್ರಾಮದ ಬಸವಯ್ಯ ಅವರ ಮನೆಯ ಚಾವಣಿ ಗಾಳಿಗೆ ಹಾರಿ ಹೋಗಿದ್ದು, ಸುಮಾರು 50 ಸಾವಿರ ನಷ್ಟ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement