ಸಂಶೋಧನೆ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿರಲಿ: ಸಿ.ಎಸ್. ನಾಗರಾಜ್
ಮೈಸೂರು: ಶಿಕ್ಷಣ ಸಂಶೋಧನೆಗಳು ಸಾಮಾಜಿಕ ಅಭಿವೃದ್ಧಿಗೆ ಪೂರಕ ಆಗಿರಬೇಕು ಎಂದು ನವದೆಹಲಿಯ ಎನ್ಸಿಇಆರ್ಟಿ ಶಿಕ್ಷಣ ಸಂಶೋಧನೆ ಮತ್ತು ನೀತಿ ಯೋಜನೆ ವಿಭಾಗದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಸ್. ನಾಗರಾಜ್ ಹೇಳಿದರು. ಮೈಸೂರು ವಿವಿ ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಕಾಲೇಜು ಹಾಗೂ ಶಿಕ್ಷಣ ಅಧ್ಯಯನ ವಿಭಾಗವು ಸಂಯುಕ್ತವಾಗಿ ಪದವಿ ಕಾಲೇಜು ಮತ್ತು ವಿವಿ ಸಹಾಯಕ ಪ್ರಾಧ್ಯಾಪಕರಿಗಾಗಿ ಆಯೋಜಿಸಿರುವ 1ನೇ ಶಿಕ್ಷಣ ಅಧ್ಯಯನ ಪುನಶ್ಚೇತನ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಂಶೋಧನೆಗಳು ವ್ಯಕ್ತಿಗತವಾಗುತ್ತಿದೆ. ಪಿಎಚ್.ಡಿ ಪದವಿಗಾಗಿ ಸಂಶೋಧನೆ ಮಾಡುತ್ತಿದ್ದಾರೆ. ಪದವಿ ಪಡೆದ ಬಳಿಕ ಸಂಶೋಧನೆಯನ್ನು ಮರೆಯುತ್ತಿದ್ದಾರೆ. ಶಿಕ್ಷಣದಲ್ಲಿ ಅಸಮಾನತೆ ಇದೆ. ಸಮಾಜದ ಅಭಿವೃದ್ಧಿಗೆ ವ್ಯವಸ್ಥಿತವಾದ, ವಿಸ್ತೃತವಾದ ಸಂಶೋಧನೆಗಳು ನಡೆಯಬೇಕು. ಆ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದರು. ಗುಣಮಟ್ಟದ ಶಿಕ್ಷಣ: ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜ ಮಾತನಾಡಿ, ಪ್ರತಿ ವರ್ಷ 350ರಿಂದ 400 ಮಂದಿ ಪಿಎಚ್ಡಿ ಪದವಿ ಪಡೆಯುತ್ತಿದ್ದಾರೆ. ಆದರೆ, ಸಂಶೋಧನಾ ಪದವಿಗಳಿಂದ ಆಗುತ್ತಿರುವು ಪರಿಣಾಮ, ಪ್ರಯೋಜನ ಏನೆಂಬುದು ಗೊತ್ತಾಗುತ್ತಿಲ್ಲ ಎಂದರು. ಸಂಶೋಧನೆಗಳು ಸರ್ಕಾರವು ನೀತಿ, ನಿಯಮಗಳನ್ನು ರೂಪಿಸಲು ಸಹಕಾರಿ ಆಗಬೇಕು ಎಂದರು. ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಕಾಲೇಜು ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು.