ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೊಲೀಸರ ವಿರುದ್ಧವೇ ಪ್ರಕರಣ ದಾಖಲು!

ಪೊಲೀಸರ ವಿರುದ್ಧವೇ ಪ್ರಕರಣ ದಾಖಲಾದ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ.

Srinivasa Murthy VN
Updated On : 9 Mar 2014, 1:27 am

ಮೈಸೂರು: ಕೇರಳದ ಖಾಸಗಿ ಬಸ್ನಲ್ಲಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಂಡಿದ್ದ ಪೊಲೀಸರ ವಿರುದ್ಧವೇ ಪ್ರಕರಣ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ.
ಮೈಸೂರು ದಕ್ಷಿಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಐ ಜಗದೀಶ್ (ಹಾಲಿ ಬನ್ನೂರು ಠಾಣೆಯ ಎಸ್ಐ), ಪೇದೆಗಳಾದ ಸತೀಶ್, ಅಶೋಕ್ ಮತ್ತು ಲತೀಫ್ ಎಂಬವರ ಮೇಲೆ ಮೈಸೂರು ತಾಲೂಕಿನ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿಂದ ಕೇರಳದ ಕ್ಯಾಲಿಕಟ್ಗೆ ಹೋಗುವ ಖಾಸಗಿ ಬಸ್ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಜ.3ರ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಐ ಜಗದೀಶ್ ಮತ್ತು ಪೇದೆಗಳಾದ ಸತೀಶ್, ಅಶೋಕ್, ಲತೀಫ್ ಎಂಬವರು ಇಲವಾಲದ ಬಳಿ ಕೇರಳದ ಖಾಸಗಿ ಬಸ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಈ ವೇಳೆ ಬಸ್ನ ಲಗೇಜ್ ಬಾಕ್ಸ್ನಲ್ಲಿ ಹಣ ಸಿಕ್ಕಿದೆ.
ಈ ಹಣ ಯಾರದು ಎಂಬ ಪ್ರಶ್ನೆಗೆ ಬಸ್ನಲ್ಲಿದ್ದ ಯಾವ ಪ್ರಯಾಣಿಕರೂ ತಮ್ಮದು ಎಂದು ಮುಂದೆ ಬರಲಿಲ್ಲ. ಬಸ್ ಚಾಲಕ ಮತ್ತು ಕ್ಲೀನರ್ ಸಹ ಇದರ ಬಗ್ಗೆ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಹಣವನ್ನು ಇಲವಾಲ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಚಾಲಕ ಅಕ್ತರ್ ಹುಸೇನ್ ಮತ್ತು ಕ್ಲೀನರ್ ಮುನೀರ್ ಎಂಬವರನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಚಿನ್ನದ ವ್ಯಾಪಾರಿಯ ಹಣ: ಅಕ್ತರ್ ಹುಸೇನ್ ಮತ್ತು ಮುನೀರ್ ಜೈಲಿನಿಂದ ಬಿಡುಗಡೆಯಾದ ಮೇಲೆ ಪೊಲೀಸರು ಬಸ್ನಿಂದ 2.25 ಕೋಟಿ ವಶಪಡಿಸಿಕೊಂಡಿದ್ದರು. ಆದರೆ, 20 ಲಕ್ಷ ಮಾತ್ರ ವಶಪಡಿಸಿಕೊಂಡಿರುವುದಾಗಿ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ನಡುವೆ ಹಣ ನನ್ನದೇ ಎಂದು ಕೇರಳ ಮೂಲದ ಚಿನ್ನದ ವ್ಯಾಪಾರಿ ಸೋಹನಾಬುದ್ದೀನ್ ಎಂಬವರು ಒಪ್ಪಿಕೊಂಡು, ದಾಖಲೆಗಳನ್ನು ಪೊಲೀಸರಿಗೆ ತೋರಿಸಿದ್ದಾರೆ. ಅಲ್ಲದೆ, ಕೇರಳದ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಈ ವಿಚಾರವನ್ನು ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕೇರಳ ಗೃಹ ಸಚಿವರು ಕರ್ನಾಟಕದ ಗೃಹ ಸಚಿವ ಜಾರ್ಜ್ ಅವರನ್ನು ಕೋರಿದ್ದಾರೆ.
ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಗೃಹ ಸಚಿವ ಜಾರ್ಜ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ದಕ್ಷಿಣ ವಲಯದ ಐಜಿಪಿ ಅವರಿಗೆ ಸೂಚಿಸಿದ್ದಾರೆ. ಡಿಜಿಪಿ ಅವರು ಮೈಸೂರು ಎಸ್ಪಿ ಅಭಿನವ್ ಅಶೋಕ್ ಖರೆ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ಎಸ್ಪಿ ಅಭಿನವ್ ಅಶೋಕ್ ಖರೆ ಅವರು, ಕೇರಳ ಮೂಲದ ಚಿನ್ನದ ವ್ಯಾಪಾರಿ ನೀಡಿರುವ ದೂರಿನನ್ವಯ ಎಸ್ಐ ಜಗದೀಶ್ ಸೇರಿದಂತೆ 4 ಮಂದಿ ವಿರುದ್ಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇಲಾಖೆಯಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದೇನೆ. ಹಣ ತಮ್ಮದು ಎಂದು ಬಂದಿರುವವರು ಸೂಕ್ತ ದಾಖಲೆ ನೀಡಿ, ದೂರು ಸಲ್ಲಿಸಿದ್ದಾರೆ. ಹೀಗಾಗಿ ಎಸ್ಐ ಜಗದೀಶ್ ಮತ್ತು ಮೂವರು ಪೇದೆಗಳ ವಿರುದ್ಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.
-ಅಭಿನವ್ ಖರೆ, ಮೈಸೂರು ಎಸ್ಪಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement