ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಲ್ವರು ಪೊಲೀಸರೂ ತಲೆ ಮರೆಸಿಕೊಂಡಿದ್ದಾರೆ

Srinivasa Murthy VN
Updated On : 10 Mar 2014, 1:27 am

ಮೈಸೂರು: ಕೇರಳದ ಖಾಸಗಿ ಬಸ್ನಲ್ಲಿ ಹಣ ದೋಚಿರುವ ಆರೋಪ ಹೊತ್ತಿರುವ ಎಸ್ಐ ಸೇರಿದಂತೆ ನಾಲ್ವರು ಪೊಲೀಸರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್ಪಿ ಅಭಿನವ್ ಅಶೋಕ್ ಖರೆ ತಿಳಿಸಿದರು.
ಚಿನ್ನದ ವ್ಯಾಪಾರಿ ನೀಡಿರುವ ದೂರಿನ್ವಯ ಎಸ್ಐ ಜಗದೀಶ್, ಪೇದೆಗಳಾದ ಸತೀಶ್, ಅಶೋಕ್ ಮತ್ತು ಲತೀಫ್ ಎಂಬವರ ವಿರುದ್ಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಈ ನಡುವೆ ನಾಲ್ಕು ಮಂದಿ ಆರೋಪಿಗಳು ಕರ್ತವ್ಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ. ತನಿಖೆ ಪೂರೈಸಿ ಅಗತ್ಯವಿದ್ದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಎಸ್ಐ ಜಗದೀಶ್ ತಲೆ ಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ದಕ್ಷಿಣ ಠಾಣೆಯ ಎಸ್ಐ ಲವ ಅವರನ್ನು ಬನ್ನೂರು ಠಾಣೆಯ ಪ್ರಭಾರ ಎಸ್ಐ ಆಗಿ ಜವಾಬ್ದಾರಿ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಮಿಕ ಸಾವು
ಮೈಸೂರು: ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಗನ್ಹೌಸ್ ವೃತ್ತದ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೈಸೂರು ತಾಲೂಕು ಹಿನಕಲ್ ನಿವಾಸಿ ಅಂದಾನಿಗೌಡ(45) ಮೃತಪಟ್ಟವರು. ಉದ್ಯಾನವನದಲ್ಲಿರುವ ಮಂಟಪ ನಿರ್ಮಿಸಲಾಗುತ್ತಿದ್ದು, ಮಂಟಪ ಮೇಲ್ಭಾಗದಲ್ಲಿ ಅಂದಾನಿಗೌಡ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಕೆಲಸ ಮಾಡುತ್ತಿದ್ದಂತೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗುಂಗ್ರಾಲ್ ಛತ್ರ; 2 ಮನೆಯಲ್ಲಿ ಕಳವು
ಮೈಸೂರು: ಎರಡು ಮನೆಗಳಿಗೆ ನುಗ್ಗಿದ ಕಳ್ಳರು 2.45 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಇಲ್ಲಿನ ನಿವಾಸಿ ಕೆಂಚೇಗೌಡ ಮತ್ತು ಕುಟುಂಬದವರು ಮನೆಯಲ್ಲಿ ಮಲಗಿದ್ದರು. ಮನೆಯ ಚಿಲ್ಕಾ ತೆಗೆದು ಒಳ ನುಗ್ಗಿದವರು, ಕೆಂಚೇಗೌಡ ಪತ್ನಿಯ ಕತ್ತಿನಲ್ಲಿದ್ದ 1.10 ಲಕ್ಷ ಮೌಲ್ಯದ 40 ಗ್ರಾಂ. ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ. ಇದೇ ರೀತಿ ಅನಂತು ಎಂಬವರ ಮನೆಗೆ ನುಗ್ಗಿ ಬೀರುವಿನಲ್ಲಿದ್ದ 1 ಲಕ್ಷ ಹಾಗೂ 12 ಗ್ರಾಂ. ಚಿನ್ನಾಭರಣ ಸೇರಿದಂತೆ ಒಟ್ಟು 1.35 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ, ಗುಂಗ್ರಾಲ್ ಛತ್ರದ ಲಕ್ಷ್ಮಿದೇವಿ ದೇವಸ್ಥಾನದ ಬಾಗಿಲು ಮುರಿದು ಕಳವು ಮಾಡಲು ವಿಫಲ ಯತ್ನ ನಡೆಸಿದ್ದಾರೆ. ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಶ್ರೀಹರಿ ಬರಗೂರು, ಸರ್ಕಲ್ ಇನ್ಸ್ಪೆಕ್ಟರ್ ಸದಾನಂದ ತಿಪ್ಪಣ್ಣನವರ್, ಎಸ್ಐ ಟಿ.ಎಂ. ಪುನೀತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಟ್ರಕ್ ಡಿಕ್ಕಿ; ಬೈಕ್ ಸವಾರ ಸಾವು
ಮೈಸೂರು: ಟ್ರಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿದ್ದ ಯುವತಿ ಗಾಯಗೊಂಡಿರುವ ಘಟನೆ ಕೆಆರ್ಎಸ್ ರಸ್ತೆ ಸುನಂದಾ ಫ್ಯಾಕ್ಟರಿ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಕಾಳಮ್ಮನಕೊಪ್ಪಲು ನಿವಾಸಿ ಹಾಗೂ ಎಂಟಿಆರ್ ಕಂಪನಿಯ ನೌಕರ ರಂಜಿತ್ (23) ಮೃತಪಟ್ಟವರು. ಹಿಂಬದಿ ಕುಳಿತಿದ್ದ ಬೆಂಗಳೂರಿನ ನೆಲಮಂಗಲದ ನಿವಾಸಿ ಹಾಗೂ ವಿದ್ಯಾರ್ಥಿನಿ ಆರ್.ಶ್ರುತಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸವಾರ ರಂಜಿತ್ ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿದ್ದ ಶ್ರುತಿಗೆ ತೀವ್ರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement