ನೋಂದಣಿ ಅಭಿಯಾನ ಆರಂಭ
ಮೈಸೂರು: ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಏ.17ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಹಮ್ಮಿಕೊಂಡಿರುವ ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಭಾನುವಾರ ಆರಂಭವಾಗಿದೆ. ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಇರುವ 2675 ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಮತದಾರರ ಪಟ್ಟಿ ಪರಿಶೀಲಿಸಲು ಅವಕಾಶ ಕಲ್ಪಿಸಿದ್ದರು. ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್) ಇದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶ ಸಿಗುವುದಿಲ್ಲ. ಹೀಗಾಗಿ ಎಲ್ಲ ಮತಗಟ್ಟೆಗಳಲ್ಲಿ ಮತದಾರ ಹೆಸರು ನೋಂದಣಿ ವಿಶೇಷ ಅಭಿಯಾನ ಆಯೋಜಿಸಿದೆ. ಇಂದು ಪರಿಶೀಲನೆ: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1973 ಮತಗಟ್ಟೆಗಳಿದ್ದು, ಮತಗಟ್ಟೆ ಅಧಿಕಾರಿಗಳು ಮತದಾರರಿಂದ ಅರ್ಜಿ ಸ್ವೀಕರಿಸಿದ್ದಾರೆ. ನಾಗರಿಕರು ಸಲ್ಲಿಸಿರುವ ಅರ್ಜಿಗಳನ್ನು ಅಗತ್ಯ ಬಿದ್ದರೆ ಮನೆ ಮನೆಗೆ ಭೇಟಿ ನೀಡಿ ಅಧಿಕಾರಿಗಳು ಸೋಮವಾರ ಪರಿಶೀಲಿಸಲಿದ್ದಾರೆ.
ಕ್ರಿಕೆಟ್; ಪಿಜಿಎಸ್ಸಿ ತಂಡಕ್ಕೆ ಜಯ
ಮೈಸೂರು: ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಎನ್ಐಇ ಕಾಲೇಜು ತಂಡವನ್ನು, ಪಿಜಿಎಸ್ಸಿ ತಂಡವು 4 ವಿಕೆಟ್ಗಳಿಂದ ಮಣಿಸಿದೆ. ಕೆಎಸ್ಸಿಎ ಆಯೋಜಿಸಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗುರುಪ್ರಸಾದಸ್ವಾಮಿ ಅವರ ಅಜೇಯ 81 ರನ್ ಗಳ ನೆರವಿನಿಂದ 49.3 ಓವರ್ಗೆ 161 ರನ್ ಗಳಿಸಿದ ಎನ್ಐಇ ತಂಡವನ್ನು ಪಿಜಿಎಸ್ಸಿ ತಂಡವು ಭರತ್ ಅವರ ಅಜೇಯ ಅರ್ಧ ಶತಕದ ನೆರವಿನಿಂದ ಮಣಿಸಿತು. ಭರತ್ಗೆ ಪ್ರಜ್ವಲ್(ಅಜೇಯ- 31) ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಪಿಜಿಎಸ್ಸಿ ತಂಡ 43.1 ಓವರ್ಗೆ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಯುವರಾಜ ಕಾಲೇಜು ತಂಡವು ಎಂಐಟಿ ತಂಡವನ್ನು 41 ರನ್ಗಳ ಅಂತರದಿಂದ ಸೋಲಿಸಿತು. ಯುವರಾಜ ಕಾಲೇಜು ತಂಡ 39 ಓವರ್ಗೆ 115 ರನ್ ಗಳಿಸಿದರೆ, ಎಂಐಟಿ ತಂಡ 33.3 ಓವರ್ಗೆ 74 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಯುವರಾಜ ಕಾಲೇಜು ತಂಡದ ನವೀನ್ಕುಮಾರ್ ಕೇವಲ 8 ರನ್ ನೀಡಿ 6 ವಿಕೆಟ್ ಕಬಳಿಸಿದರು.