ವಿವಿಧೆಡೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಾಥಾ, ಉಪನ್ಯಾಸ, ಸನ್ಮಾನ ಹಾಗೂ ಮತ್ತಿತರ ಕಾರ್ಯಕ್ರಮಗಳು ಶನಿವಾರ ನಡೆದವು. ಫೇಸ್ಬುಕ್ ಮೂಲಕ ಸ್ನೇಹಿತರಾದ ಗೆಳತಿಯರ ಬಳಗವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳ ರಕ್ಷಣೆಗೆ ಒತ್ತಾಯಿಸಿ, ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಅಭಿಯಾನ ನಡೆಸಿತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ದ್ವಿಚಕ್ರ ವಾಹನದ ಮೂಲಕ ವಿವಿಧ ಘೋಷಣಾ ಫಲಕದೊಂದಿಗೆ ಅಭಿಯಾನ ನಡೆಸಿದ ಈ ತಂಡವು ಹಾರ್ಡಿಂಜ್ ವೃತ್ತದ ಮೂಲಕ, ಇಟ್ಟಿಗೆಗೂಡು ಮಾರ್ಗವಾಗಿ ಮೃಗಾಲಯದ ಮೂಲಕ ಸಾಗಿ, ಲಲಿತಮಹಲ್ ರಸ್ತೆ ಮುಖಾಂತರ ಚಾಮುಂಡಿ ಬೆಟ್ಟಕ್ಕೆ ತೆರಳಿತು. ನಂತರ ಅಲ್ಲಿಂದ ಹಿಂತಿರುಗಿ ಅದೇ ಮಾರ್ಗವಾಗಿ ಬಂದು ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಮೈಸೂರು ಹುಣಸೂರು ರಸ್ತೆ, ವಾಲ್ಮೀಕಿ ರಸ್ತೆ ಮೂಲಕ ವಿ.ವಿ. ಮೊಹಲ್ಲಾದ ಕಾಳಿದಾಸ ವೃತ್ತದಲ್ಲಿ ಅಂತ್ಯಕೊಂಡಿತು.
ಗೆಳತಿಯರಾದ ಅನುರಾಧ, ಪೂಜಾ, ಮಾಳವಿಕ, ಕಾಂಚನ, ಗಂಗಾ, ಆರ್.ವಿ ಮಧುರ ಎಂಬ ಆರು ಮಂದಿ ಬೈಕ್ ಸವಾರಿಯಲ್ಲಿ ಸಂಚರಿಸಿ ಅಭಿಯಾನ ನಡೆಸಿದ್ದು ವಿಶೇಷ.
ಉಪನ್ಯಾಸ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಪಿಎ) ಮೈಸೂರು ಶಾಖೆ ಹಾಗೂ ರೋಟರಿ ಉತ್ತರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕ್ಯಾತಮಾರನಹಳ್ಳಿಯ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ರೋಟರಿ ಉತ್ತರ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ದಾಸ್ ಉದ್ಘಾಟಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯ ಎಂಬ ವಿಷಯ ಕುರಿತು ಡಾ. ಸೋನಿಯಾ ವಂದನಾ ಹಾಗೂ ಮಹಿಳೆಯರ ಸಬಲೀಕರಣ ಎಂಬ ವಿಷಯ ಕುರಿತು ಡಾ.ಎಸ್.ಎಸ್. ಮಾಲಿನಿ ಮಾತನಾಡಿದರು. ಎಫ್ಪಿಎ ಮೈಸೂರು ಅಧ್ಯಕ್ಷ ಮಡ್ಡೀಕೆರೆ ಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮೀ ಜೋಯಿಸ್, ರೋಟರಿ ಉತ್ತರ ಸಂಸ್ಥೆಯ ಕಾರ್ಯದರ್ಶಿ ನರೇಂದ್ರ, ಸದಸ್ಯರಾದ ಅದಿಬಾ, ರೇಣು, ಮಾಲಿನಿ, ಇಂದಿರಾ ಹಾಗೂ ಕೀರ್ತಿ ಮುಖ್ಯ ಅತಿಥಿಗಳಾಗಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಿಟಿಸನ್ ಫಾರ್ ಅಕೌಂಟಬಲ್ ಗವರನ್ಸ್ ಸಂಸ್ಥೆಯು ಚಾಯ್ ಪೇ ಚರ್ಚಾ ಕಾರ್ಯಕ್ರಮ ನಡೆಸಿತು. ಮಹಿಳಾ ಸಬಲೀಕರಣ ಎಂಬ ವಿಷಯ ಕುರಿತು ನಡೆಸಿದ ಈ ಕಾರ್ಯಕ್ರಮವನ್ನು ನಗರದ ಎನ್.ಆರ್. ಮೊಹಲ್ಲಾ, ಚಾಮುಂಡಿಪುರಂ, ವಿವೇಕಾನಂದನಗರ, ಗೋಕುಲಂ ಹಾಗೂ ಹೆಬ್ಬಾಳಿನ ವಿವಿಧ ಟೀ ಅಂಗಡಿಗಳಲ್ಲಿ ನಡೆಸಲಾಯಿತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಾರ್ವಜನಿಕರು ನೇರ ಸಂವಾದ ನಡೆಸಿದರು. ದಯಾನಂದ ಸಾಗರ್ ಹೊಯ್ಸಳ, ಧರ್ಮರಾಜ್ ಗೌಡ, ಬಾಲಕೃಷ್ಣ ಕಿಣಿ ಇದ್ದರು.
ಸನ್ಮಾನ: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಮಹಿಳಾ ದಿನ ಅಚರಿಸಲಾಯಿತು. ಈ ಸಂದರ್ಭದಲ್ಲಿ ಡಿಎಫ್ಆರ್ಎಲ್ನ ತಾಂತ್ರಿಕ ಅಧಿಕಾರಿ ಡಾ. ವಿ. ಪುಟ್ಟಲಿಂಗಮ್ಮ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಭಾರ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಆರ್. ನಟರಾಜ ಅರಸ್ ಅತಿಥಿಯಾಗಿದ್ದರು. ಪ್ರಾಂಶುಪಾಲೆ ಡಾ.ಜಿ.ಎಂ. ಸುಶೀಲ ಅಧ್ಯಕ್ಷತೆ ವಹಿಸಿದ್ದರು.
ಸುರಕ್ಷತೆಗೆ ಸೂತ್ರ: ಮಹಾಜನ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಹಿಳಾ ದಿನ ಆಚರಿಸಲಾಯಿತು. ಕಾಲೇಜಿನ ಅಪರಾಧಶಾಸ್ತ್ರ ಮತ್ತು ವೈದ್ಯಕೀಯ ನ್ಯಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಬಿ ಅರವಿಂದ್ ಅವರು ಮಹಿಳೆಯರ ಸುರಕ್ಷತೆಯ ಸೂತ್ರಗಳು ಎಂಬ ವಿಷಯ ಕುರಿತು ಮಾತನಾಡಿದರು. ಪ್ರಾಂಶಪಾಲ ಪ್ರೊ. ಕೆ.ವಿ. ಪ್ರಭಾಕರ, ಎಂಯುಪಿಸಿಟಿಎ ಅಧ್ಯಕ್ಷ ಡಾ. ಸಿ.ಆರ್. ರಾಜು, ಸಹಾಯಕ ರಿಜಿಸ್ಟಾರ್ ಶ್ವೇತ ಇದ್ದರು.