ಶರಣರ ಚಳವಳಿ ದೊಡ್ಡಕ್ರಾಂತಿ
ಕ.ಪ್ರ.ವಾರ್ತೆ ಮೈಸೂರು ಮಾ. 9
ಶರಣರ ಚಳವಳಿಯು ಸಮಾಜದ ಪರಿವರ್ತನೆಗೆ ನೀಡಿದ ಬಹುದೊಡ್ಡ ಕಾಂತ್ರಿ ಎಂದು ಸಾಹಿತಿ ಹೊರೆಯಾಲ ದೊರೆಸ್ವಾಮಿ ಹೇಳಿದರು.
ಬ್ರಹ್ಮರ್ಷಿ ಸವಿತಾ ಮಹರ್ಷಿ ಮತ್ತು ಶಿವಶರಣ ಹಡಪದ ಅಪ್ಪಣ್ಣರವರ ಅಧ್ಯಯನ ಕೇಂದ್ರ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನವು ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಮಹರ್ಷಿ ಸವಿತಾ ಸಂಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕವಿ- ಕಾವ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣ ಅವರು ಅನುಭವ ಮಂಟಪದ ಮೂಲಕ ಎಲ್ಲಾ ಜನಾಂಗವನ್ನು ಒಂದುಗೂಡಿಸಿ ನಾವೆಲ್ಲರೂ ಒಂದೇ ಎಂಬ ಮನೋಭಾವವನ್ನು ಬಿತ್ತಿದವರು. ಸಮಾಜದಲ್ಲಿ ಅಸಮಾನತೆಯನ್ನು ನೀಗಿಸಲು ಅಂದು ಶರಣರು ನಡೆಸಿದ ಚಳವಳಿಯು ಎಲ್ಲಾ ಕಾಲಕ್ಕೂ ಸಮಾಜದ ಪರಿವರ್ತನೆಗೆ ಬಹುದೊಡ್ಡ ಕ್ರಾಂತಿ ಎಂದರು.
ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಾದರ ಚನ್ನಯ್ಯ ಹಾಗೂ ಹಡಪದ ಅಪ್ಪಣ್ಣ ಸೇರಿದಂತೆ ಎಲ್ಲಾ ಶರಣರ ಮೂಲ ಆಶಯವು ಜನರ ಕಲ್ಯಾಣಕ್ಕೆ ಪೂರಕವಾದುದು. ಅಂದು ಅಂತಹ ಮಹನೀಯರು ತೋರಿಸಿ ಕೊಟ್ಟ ಆದರ್ಶಗಳು ಇಂದಿನ ಸಮಾಜದಲ್ಲಿ ಸಾಮರಸ್ಯದ ಬದುಕಿಗೆ ಅನುಕರಣೀಯ ಎಂದು ಅವರು ತಿಳಿಸಿದರು.
ಸಾಹಿತ್ಯದ ಸಂವಹನ ಕ್ರಿಯೆಗೆ ಗದ್ಯ ಹಾಗೂ ಪದ್ಯ ಎರಡು ಮಾರ್ಗ ಬಿಟ್ಟು ಬೇರೆ ಯಾವುದು ಇಲ್ಲ. ಕಥೆಯಾಗಲಿ, ನಾಟಕವಾಗಲಿ ಅಥವಾ ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಕಾವ್ಯದ ನೆಲೆಗಟ್ಟು ಬೇಕೇಬೇಕು. ಇಂದಿನ ಯುವಜನತೆಯಲ್ಲಿ ಕಾವ್ಯದ ಆಸಕ್ತಿ ಕಡಿಮೆಯಾಗುತ್ತಿದ್ದು, ಅದನ್ನು ಬೆಳೆಸಲು ಇಂತಹ ಕವಿ ಸಮ್ಮೇಳನ ಏರ್ಪಡಿಸಿರುವುದು ಅಭಿನಂದನೀಯ ಎಂದರು.
ಪ್ರಾಸ್ತಾವಿಕ ಮಾತುಗಳಾಡಿದ ಕಳಲೆ ಗುರುಸ್ವಾಮಿ, ಇಂದಿನ ವೇಗದ ಜೀವನದಲ್ಲಿ ಮನುಷ್ಯನಿಗೆ ಸಮಯದ ಅಭಾವ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಕಾವ್ಯದ ಓದು ಹಾಗೂ ರಚನೆ ಬಗ್ಗೆ ಆಸಕ್ತಿ ಮೂಡಿಸಬೇಕು. ಈ ದಿಸೆಯಲ್ಲಿ ಇಂತಹ ಕವಿಗೋಷ್ಠಿಗಳು ಹೆಚ್ಚಾಗಿ ಆಯೋಜಿಸಬೇಕು. ಆ ಮೂಲಕ ಸಾಹಿತ್ಯದ ಬೆಳವಣಿಗೆಗೂ ಮುಂದಾಗಬೇಕು ಎಂದು ಅವರು ಆಶಿಸಿದರು.
ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಖಜಾಂಚಿ ನರೇಶ್ ಇದ್ದರು. ಪ್ರಧಾನ ಕಾರ್ಯದರ್ಶಿ ಸುವೆಂತ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷೆ ಮಹಾದೇವಮ್ಮ ನಿರೂಪಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಕಿರಿಯ ಹಾಗೂ ಹಿರಿಯ ಕವಿಗಳು ಕವಿತೆ ವಾಚಿಸಿದರು.