ಸಿಲಿಂಡರ್ ಕಳ್ಳನ ಸೆರೆ, ಮತ್ತೊಬ್ಬ ಪರಾರಿ
ಹುಣಸೂರು: ತಾಲೂಕಿನ ವಿವಿಧ ಶಾಲೆ- ಅಂಗನವಾಡಿಗಳಲ್ಲಿ ಸಿಲಿಂಡರ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಿಳಿಕೆರೆ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 15 ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಶಾಂತಿನಗರದ ನಿವಾಸಿ ಮಹಮದ್ ಅಂಜದ್ ಎಂಬವರ ಪುತ್ರ ಉಮರ್ ಹಾಗೂ ಗೌಸಿಯಾನಗರದ ಸಮೀರ್ ಆಲಿಯಾಸ್ ಸಮೀರ್ ಪಾಷ ಕಳ್ಳತನ ಆರೋಪ ಎದುರಿಸುತ್ತಿದ್ದಾರೆ. ಇವರಿಬ್ಬರಲ್ಲಿ ಉಮರ್ನನ್ನು ಬಂಧಿಸಲಾಗಿದ್ದು, ಸಮೀರ್ ಪರಾರಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಿಸ್ಕವರಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಿಳಿಕೆರೆ ಪೊಲೀಸರು ಗಸ್ತಿನಲ್ಲಿದ್ದಾಗ ಮಾ.8ರಂದು ಮಲ್ಲಿನಾಥಪುರದ ಸರ್ಕಾರಿ ಶಾಲೆ ಬಳಿ ಇಬ್ಬರು ಡಿಸ್ಕವರಿ ಬೈಕ್ ನಿಲ್ಲಿಸಿಕೊಂಡು ಸಿಲಿಂಡರ್ ಕಳ್ಳತನಕ್ಕೆ ಹೊಂಚು ಹಾಕುತ್ತಿರುವಾಗಲೇ ಪೊಲೀಸರು ಅನುಮಾನಗೊಂಡು ಅವರನ್ನು ಬೆನ್ನಟ್ಟಿದ್ದಾರೆ. ಸಮೀರ್ ಪಾಷ ಸಿಕ್ಕಿಬಿದ್ದು ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದಾನೆ. ಕಳೆದ ಒಂದೂವರೆ ವರ್ಷಗಳಿಂದ ಬಿಳಿಕೆರೆ ಹೋಬಳಿಯ ಮಲ್ಲಿನಾಥಪುರ, ರಾಯನಳ್ಳಿ, ಉದ್ದೂರು, ಗೋಹಳ್ಳಿ, ಮಧುಗಿರಿಕೊಪ್ಪಲು, ಜೀನಳ್ಳಿ, ಹಗರನಹಳ್ಳಿ, ಚಿಕ್ಕಾಡಿಗನಹಳ್ಳಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಕಳ್ಳತನ ಮಾಡಿ, ಮೈಸೂರಿನ ಅಸ್ಗರ್ ಪಾಷಾ ಎಂಬವವರಿಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ ಎಂದು ಡಿವೈಎಸ್ಪಿ ನಂಜುಂಡ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೃತ್ತ ನಿರೀಕ್ಷಕ ಗಜೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಬಿಳಿಕೆರೆ ಠಾಣೆ ಎಸ್ಐ ಉದಯರವಿ, ಸಿಬ್ಬಂದಿಯಾದ ಸತೀಶ, ಪ್ರಕಾಶ, ಮನೋಹರ್, ಚಂದ್ರಶೇಖರ, ಲಿಂಗರಾಜು, ಮಹೇಶ, ಕಬೀರ್, ಬಸಪ್ಪ, ಗಿರಿಕುಮಾರ್ ಕಾರ್ಯಾಚರಣೆ ತಂಡದಲ್ಲಿದ್ದರು.