ಲಾರಿ ಡಿಕ್ಕಿ: ಭದ್ರತಾ ಸಿಬ್ಬಂದಿ ಸಾವು
ಮೈಸೂರು: ಲಾರಿ ಡಿಕ್ಕಿಯಾಗಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. ಎಂಜಿಎಂ ಫೋರ್ಡ್ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಹಾಗೂ ನೇಪಾಳ ಮೂಲದ ಸುಶೀಲ್ ಶರ್ಮಾ (22) ಮೃತಪಟ್ಟವರು. ಇವರು ಕೆಲಸ ಮುಗಿಸಿ ದ್ವಿಚಕ್ರವಾಹನದಲ್ಲಿ ಕಾರ್ಖಾನೆಯಿಂದ ಹೊರಗೆ ಬರುತ್ತಿದ್ದರು. ಈ ವೇಳೆ ಲಾರಿಯೊಂದು ದ್ವಿಚಕ್ರವಾಹನಕ್ಕೆ ತಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತಾರಾಷ್ಟ್ರೀಯ ಸಮ್ಮೇಳನ
ಸಂತ ಜೋಸೆಫ್ ಆಸ್ಪತ್ರೆಯಿಂದ ಮಾ.12ರ ಸಂಜೆ 4ಕ್ಕೆ ಹೋಟೆಲ್ ರಿಗಾಲಿಸ್ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿದ್ದು, ಜರ್ಮನಿಯ ಉಪ ಕಾನ್ಸುಲೇಟ್ ಜನರಲ್ ಹ್ಯಾನ್ಸ್ ಗುಂಟರ್ ಲಾಫ್ಲರ್ ಉದ್ಘಾಟಿಸುವರು. ಜರ್ಮನಿ, ಯುಎಸ್ಎ, ಬಾಂಗ್ಲಾದೇಶದ ಪ್ರತಿನಿಧಿಗಳು ಭಾಗವಹಿಸುವರು.
ಪ್ರಾಣಾಯಾಮ ಚಿಕಿತ್ಸೆ ನಾಳೆ
ಸರಸ್ವತಿಪುರಂನಲ್ಲಿರುವ ದೀಕ್ಷಿತ್ ಹೆಲ್ತ್ ಕ್ಲಿನಿಕ್ ಆ್ಯಂಡ್ ರಿಸರ್ಚ್ ಸೆಂಟರ್ನಲ್ಲಿ ಮಾ.12ರ ಬೆಳಗ್ಗೆ 6 ರಿಂದ 7 ಹಾಗೂ ಸಂಜೆ 5.30 ರಿಂದ ಸಂಜೆ 6.30 ರವರೆಗೆ ಯೋಗಮುದ್ರೆ ಹಾಗೂ ಪ್ರಾಣಾಯಾಮ ಚಿಕಿತ್ಸಾ ಶಿಬಿರ ನಡೆಸಲಿದ್ದು, ದೂ. 0821- 2543619 ಸಂಪರ್ಕಿಸಬಹುದು.
17ಕ್ಕೆ ಅಂಚೆ ಅದಾಲತ್
ಸಮಗ್ರ ಅಂಚೆ ಸೇವೆಗಳ ದೂರುಗಳನ್ನು ಮತ್ತು ಕುಂದು ಕೊರತೆಗಳನ್ನು ನಿವಾರಿಸಲು ಹಾಗೂ ಅಂಚೆ ಸೇವೆಗಳ ಸುಧಾರಣೆಗಾಗಿ ಸಲಹೆಗಳನ್ನು ಸ್ವಾಗತಿಸಲು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರು ಮಾ. 17ರ ಬೆಳಗ್ಗೆ 11ಕ್ಕೆ ಡಾಕ್ ಅದಾಲತ್ ಆಯೋಜಿಸಿದ್ದಾರೆ. ಈ ಡಾಕ್ ಅದಾಲತ್ ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯ, ಮೊದಲನೆ ಮಹಡಿ, ಯಾದವಗಿರಿ ಅಂಚೆ ಕಚೇರಿ, ಮೈಸೂರು-570020 ಇಲ್ಲಿ ನಡೆಯಲಿದೆ. ಗ್ರಾಹಕರು ತಮ್ಮ ದೂರು ಮತ್ತು ಕುಂದುಕೊರತೆಗಳನ್ನು ಲಿಖಿತ ಮೂಲಕವಾಗಿ ಯಾವುದೇ ಅಂಚೆ ಕಚೇರಿಯಿಂದ ಮಾ.13 ರೊಳಗಾಗಿ ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯಕ್ಕೆ ಸಲ್ಲಿಸಬಹುದು.
ಪೌರಕಾರ್ಮಿಕನ ಕಾಲಿನ ಬೆರಳು ಕಟ್
ಮ್ಯಾನ್ಹೋಲ್ ಶುಚಿಗೊಳಿಸುತ್ತಿದ್ದ ಪೌರಕಾರ್ಮಿಕ ಯಂತ್ರವನ್ನು ಸ್ಥಗಿತಗೊಳಿಸುವ ವೇಳೆ ಕಾಲಿನ ಬೆರಳು ಕಳೆದುಕೊಂಡಿರುವ ಘಟನೆ ಉದಯಗಿರಿಯಲ್ಲಿ ಸೋಮವಾರ ನಡೆದಿದೆ. ಜ್ಯೋತಿನಗರ ನಿವಾಸಿ ಹಾಗೂ ಪೌರಕಾರ್ಮಿಕ ಕುಮಾರ್ (32) ಎಂಬವರೆ ಗಾಯಗೊಂಡಿದ್ದು, ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರ್ ಸೇರಿದಂತೆ ಐವರು ಪೌರಕಾರ್ಮಿಕರು 51ನೇ ವಾರ್ಡ್ನಲ್ಲಿ ಉದಯಗಿರಿಯಲ್ಲಿ ಯಂತ್ರ ಬಳಸಿ ಮ್ಯಾನ್ಹೋಲ್ ಶುಚಿಗೊಳಿಸುತ್ತಿದ್ದರು. ಚಾಲನೆಯಲ್ಲಿದ್ದ ಯಂತ್ರ ಸ್ಥಗಿತಗೊಳಿಸುವಾಗ ಕುಮಾರ್ ಅವರ ಬಲಗಾಲಿಗೆ ಆಕಸ್ಮಿಕವಾಗಿ ತಾಗಿ ಬೆರಳು ತುಂಡರಿಸಿದೆ. ಜೊತೆಗಿದ್ದ ಪೌರಕಾರ್ಮಿಕರು ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಕುಮಾರ್ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರ ಭರವಸೆ ನೀಡಿದ್ದಾರೆ ಎಂದು ನಗರಪಾಲಿಕೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ಮಾರ ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹಾಗೂ ನಿಗಮ ಮಂಡಳಿ ಸ್ಥಾಪಿಸಲು ಹಾಗೂ ಮನೆ ಇಲ್ಲದವರಿಗೆ ಮನೆ ದೊರಕಿಸಿಕೊಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಸವಿತಾ ಸಮಾಜದ ವತಿಯಿಂದ ಮಾ.11ರ ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.