ವೈದ್ಯರು ಸಮುದಾಯ ಮುಖಿಗಳಾಗಬೇಕು: ಡಾ. ಚಂದ್ರಶೇಖರ
ಮೈಸೂರು: ವೈದ್ಯರು ಸಮುದಾಯ ಮುಖಿಗಳಾಗಬೇಕು ಎಂದು ರಾಜೀವ್ಗಾಂಧಿ ಆರೋಗ್ಯ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್. ಚಂದ್ರಶೇಖರ್ ಶೆಟ್ಟಿ ಹೇಳಿದರು.
ಶಿವರಾತ್ರೀಶ್ವರ ನಗರದ ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವೈದ್ಯರು ಕೇವಲ ವೈಯಕ್ತಿಕವಾಗಿ ಬದುಕಬಾರದು. ಸಮುದಾಯ ಮುಖಿಗಳಾಗಬೇಕು. ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿಯೂ ಇತ್ತೀಚೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುತ್ತಿದೆ ಎಂದರು.
ವೈದ್ಯರು ಗೌಪ್ಯತೆ ಕಾಪಾಡುವುದು, ಸಮಾಲೋಚನ ನೈಪುಣ್ಯತೆ, ಮಾನಸಿಕವಾಗಿ ಅರ್ಥ ಮಾಡಿಕೊಳ್ಳುವ ಮನೋಭಾವ, ರೋಗದ ನಿಗ್ರಹ ಮತ್ತು ಆರೋಗ್ಯ ವೃದ್ಧಿಸುವ ಕೌಶಲ್ಯತೆ ಕಲಿತಿರಬೇಕು. ಆದರೆ ಪದವಿ ಪಡೆದ ಅನೇಕ ಮಂದಿಗೆ ವೈದ್ಯಕೀಯ ವಿಜ್ಞಾನದ ಹೃದಯವೆ ತಿಳಿದಿರುವುದಿಲ್ಲ. ನೀವು ಇಲ್ಲಿ ಪಡೆಯುವ ಪ್ರತಿಜ್ಞಾವಿಧಿಯು ಮನಃಪೂರ್ವಕವಾಗಿರಬೇಕು. ಸುಮ್ಮನೆ ಬೋಧಿಸುತ್ತಾರೆ. ನಾವು ಸ್ವೀಕರಿಸುತ್ತೇವೆ ಎಂದು ತಿಳಿಯಬಾರದು ಎಂದರು.
ವೈದ್ಯರು ಪಾಲನೆ, ದೃಢ ನಿರ್ಧಾರ ಕೈಗೊಳ್ಳುವುದು, ಸಮುದಾಯ ರಕ್ಷಣೆಯ ಗುಣ ಬೆಳೆಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಹಣ ವೆಚ್ಚ ಮಾಡಲಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಿಲ್ಲ. ಕ್ಯಾನ್ಸರ್, ಕಾಲರಾ ಮುಂತಾದ ಅನೇಕ ರೋಗಗಳ ನಿವಾರಣೆಗೆ ನಾವು ಇನ್ನೂ ಹೋರಾಟ ನಡೆಸುತ್ತಿದ್ದೇವೆ ಎಂದು ಅವರು ವಿಷಾದಿಸಿದರು.
ಸಮಾಜವನ್ನು ಕಲುಷಿತಗೊಳಿಸುತ್ತಿರುವ ಜಾತೀಯತೆ, ಭ್ರಷ್ಟಾಚಾರ, ಧರ್ಮಾಂಧತೆ, ಅಪರಾಧಗಳು ವಿಚಾರದಲ್ಲಿ ವೈದ್ಯರು ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ವಿವಿ ಕುಲಪತಿ ಡಾ.ಬಿ. ಸುರೇಶ್, ಕುಲಸಚಿವ ಡಾ.ಬಿ. ಮಂಜುನಾಥ್, ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ಇದ್ದರು.
ಆರು ಮಂದಿಗೆ ಚಿನ್ನದ ಪದಕ, 146 ವಿದ್ಯಾರ್ಥಿಗಳಿಗೆ ಪದವಿ
ಮೈಸೂರು: ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಆರು ಮಂದಿ ಚಿನ್ನದ ಪದಕ ವಿಜೇತರು ಸೇರಿದಂತೆ 146 ಮಂದಿ ಪದವಿ ಸ್ವೀಕರಿಸಿದರು.
ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್. ಚಂದ್ರಶೇಖರ ಶೆಟ್ಟಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಡಾ. ಜೈ ರಂಜನ್ಗೆ ಒಂದು ಚಿನ್ನದ ಪದಕ ಮತ್ತು ಮೂರು ನಗದು ಬಹುಮಾನ, ಡಾ.ಸ್ವರ್ಣ ಬುದ್ಧ ನಾಯಕ್ಗೆ ಒಂದು ಚಿನ್ನದ ಪದಕ ಮತ್ತು ನಾಲ್ಕು ನಗದು ಬಹುಮಾನ ಪಡೆದರು. ಡಾ.ನೇಹ ಪರಾಶರ, ಡಾ.ಅಭಿಷೇಕ್ ಚರಣ್, ಡಾ.ಎಂ.ಎಸ್. ಆದರ್ಶ್ ಮತ್ತು ಡಾ. ಮಿನಾಲಿ ಮಿಧ ಅವರು ತಲಾ ಒಂದು ಚಿನ್ನದ ಪದಕ ಪಡೆದರು. ಡಾ.ರಿಧಿಸೂದ್, ಡಾ.ಸ್ವಾತಿ ಗೌಡರ್, ಡಾ. ಅಪೂರ್ವ ಬಾತ್ರ, ಡಾ. ಗೌತಮ್ ಚಟರ್ಜಿ, ಡಾ.ಅಭಿನವ್ ನಾಯರ್ ಮತ್ತು ಡಾ. ಸ್ವಯಮ್ ಸಿದ್ಧಮಿಶ್ರ ಅವರು ನಗದು ಬಹುಮಾನ ಪಡೆದರು. ಬಳಿಕ ಜೆಎಸ್ಎಸ್ ವಿವಿ ಕುಲಪತಿ ಡಾ.ಬಿ. ಸುರೇಶ್ ಕ್ರಿಕೆಟ್ ಪಟುಗಳಾದ ಡಾ. ಪಾರ್ಥುಶ್ರೀ, ಡಾ. ಬಾಲಕೃಷ್ಣ, ಡಾ.ಮಾಯಾಂಕ್, ಡಾ.ರವಿ ಕುಚ್ರು, ಡಾ.ಕಾರ್ತಿಕ್ ತ್ಯಾಗಿ ಮತ್ತು ಡಾ. ಜೇಶ್ನು ಅವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.