ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವ್ಯಕ್ತಿಗತ ಬದಲಾವಣೆಯಿಂದ ಸ್ವತಂತ್ರವಾಗಿರಲು ಸಾಧ್ಯ

Srinivasa Murthy VN
Updated On : 10 Mar 2014, 11:26 am

ಮೈಸೂರು: ಮಹಿಳಾ ದಿನಾಚರಣೆಯನ್ನು ನಾವು ಎಷ್ಟು ಸಂಭ್ರಮದಿಂದ ಆಚರಿಸುತ್ತಿದ್ದರೂ ಮಹಿಳೆ ಎಷ್ಟು ಸುರಕ್ಷಿತಳು ಎಂಬ ಪ್ರಶ್ನೆಗೆ ಮೌನವೇ ಉತ್ತರವಾಗಿದೆ. ತನ್ನೊಳಗಿನ ವ್ಯಕ್ತಿಗತ ಬದಲಾವಣೆಯನ್ನು ಮಾಡಿಕೊಂಡಾಗ ಮಾತ್ರ ಮಹಿಳೆ ಸ್ವತಂತ್ರವಾಗಲು ಸಾಧ್ಯ ಎಂದು ಮೈವಿವಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಪದ್ಮಾ ಶೇಖರ್ ಅಭಿಪ್ರಾಯಪಟ್ಟರು.
ಯೂತ್ ಫಾರ್ ಆಲ್ ಮತ್ತು ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸೋಮವಾರ ನಟರಾಜ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂಲಭೂತ ಹಕ್ಕು ಮತ್ತು ಸೌಲಭ್ಯಗಳನ್ನು ಹೆಣ್ಣು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಸಮಯ ಹೊಂದಿಸಿಕೊಳ್ಳುವ ಭಾಗ್ಯ ಮಹಿಳೆಗಿರಬೇಕು. ಮಹಿಳೆಯರು ಸಮಷ್ಠಿಯನ್ನು ಪ್ರತಿನಿಧಿಸುವಂತವರು, ಮಹಿಳಾ ಪರ ಕಾನೂನುಗಳ ಪೂರ್ಣ ವಿವರ ಮಹಿಳೆಗೆ ತಿಳಿದಿರಬೇಕು ಎಂದರು. ಇದೇ ವೇಳೆ 2500ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರುವ ಮಾಸ್ತಮ್ಮ ಅವರನ್ನು ಸನ್ಮಾನಿಸಲಾಯಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಂಶುಪಾಲೆ ಡಾ.ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್ ಅತಿಥಿಯಾಗಿ ಭಾಗವಹಿಸಿದ್ದರು. ಮಮತಾ ಮತ್ತು ತಂಡದವರು ಪ್ರಾರ್ಥಿಸಿದರು. ಎಂ. ಅನಿತಾ ಸ್ವಾಗತಿಸಿದರು. ಪುಷ್ಪ ವಂದಿಸಿದರು. ಯೂತ್ ಫಾರ್ ಆಲ್ ಅಧ್ಯಕ್ಷ ಹರೀಶ್ ನಿರೂಪಿಸಿದರು.

ಹಕ್ಕಿಗಾಗಿ ಮಹಿಳೆಯರಿಗೆ ಹೋರಾಟ ಅನಿವಾರ್ಯ
ಮೈಸೂರು: ಮಹಿಳೆಯರು ತಮ್ಮ ಹಕ್ಕಿಗಾಗಿ ಎಚ್ಚೆತ್ತುಕೊಂಡು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ತಾರಿಣಿ ಚಿದಾನಂದಗೌಡ ಅವರು ಅಭಿಪ್ರಾಯಪಟ್ಟರು.
ಅನಿಕೇತನ ಒಕ್ಕಲಿಗ ಸಂಘಟನೆಗಳ ಒಕ್ಕೂಟ, ಸ್ವಾಭಿಮಾನಿ ಒಕ್ಕಲಿಗರ ಹಿತರಕ್ಷಣಾ ಪಡೆ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನಲ್ಲಿ ಮಹಿಳೆಯರಿಗೆ ಸಿಕ್ಕಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಮಹಿಳೆಯರು ಕಾರ್ಯ ಪ್ರವೃತ್ತರಾಗಬೇಕು. ಈ ಬಗ್ಗೆ ಮಹಿಳಾ ದಿನ ಆಚರಿಸುವ ಮೂಲಕ ಮಹಿಳೆಯರನ್ನು ಎಚ್ಚರಿಸಬೇಕು ಎಂದು ಸೂಚಿಸಿದರು.
ಕುವೆಂಪು ಅವರು ತಮ್ಮ ಮನೆಯ ಮಹಿಳೆಯರ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದ್ದರೋ ಅಷ್ಟೇ ಗೌರವವನ್ನು ಎಲ್ಲಾ ಮಹಿಳೆಯರ ಬಗ್ಗೆಯೂ ಇಟ್ಟುಕೊಂಡಿದ್ದರು. ತಮ್ಮ ಕಾವ್ಯದಲ್ಲಿ ಮಹಿಳೆಯರ ಬಗ್ಗೆ ಇದ್ದ ಗೌರವವನ್ನು ಕಾವ್ಯ ರೂಪದಲ್ಲಿ ಹೊರ ತಂದಿದ್ದಾರೆ. ಕಾವ್ಯದಲ್ಲಿ ಕುವೆಂಪುಗೆ ಮಹಿಳೆಯರ ಬಗ್ಗೆ ಇದ್ದ ಗೌರವವನ್ನು ಕಾಣಬಹುದಾಗಿದೆ. ತಮ್ಮ ತಾಯಿಯ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.
ಸರಳತೆ ಮೈಗೂಡಿಸಿಕೊಳ್ಳಿ: ಕಾಡಾ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ.ರವಿಕುಮಾರ್ ಮಾತನಾಡಿ, ದೇಶದಲ್ಲಿ ಶೇ.50 ಕ್ಕಿಂತ ಹೆಚ್ಚು ಮಹಿಳೆಯರು ಇರುವುದರಿಂದ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಮತ್ತು ದೇಶದ ಸಂಪತ್ತಿನಲ್ಲಿ ಶೇ.50 ರಷ್ಟು ಸವಲತ್ತು ಸಿಗಬೇಕು. ಮಹಿಳೆಯರು ಸಹಾಯ ಮನೋಭಾವನೆ, ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.ಇದೇ ವೇಳೆ ಡಾ.ವನಿತಾ, ವಿದುಷಿ ಪಂಕಜಾ ರಾಮಕೃಷ್ಣ, ಪಾರ್ವತಿ ರಾಮಕೃಷ್ಣ, ನ್ಯಾ. ಲೀಲಾವತಿ, ಪಾಲಿಕೆ ಸದಸ್ಯರಾದ ಮಂಜುಳಾ ಮಾನಸ, ರಜನಿ ಅಣ್ಣಯ್ಯ, ಗೌರಮ್ಮ, ಮೋದಾಮಣಿ, ವಸಂತ ಮನೀಶ್, ಸುಶೀಲಾ ನಂಜಪ್ಪ, ಪ್ರೇಮಾ ಶಂಕರೇಗೌಡ ಅವರನ್ನು ಸನ್ಮಾನಿಸಲಾಯಿತು.
ಹಿರಿಯರಾದ ಶಮಂತಕ್ಕ ನಿಂಗೇಗೌಡ, ಅನಿಕೇತನ ಸಂಸ್ಥೆಯ ಅಧ್ಯಕ್ಷ ಲಿಂಗರಾಜು, ಸ್ವಾಭಿಮಾನಿ ಪಡೆಯ ಗೌರವ ಅಧ್ಯಕ್ಷ ಪ್ರೊ.ಕೆ. ಆರ್. ರಂಗಯ್ಯ, ಜೆ.ಪಿ. ನಗರ ಒಕ್ಕಲಿಗರ ಸಂಘದ ಸದಸ್ಯರಾದ ಕುಮಾರ್ ಇದ್ದರು. ಮಧುರಾ ಕೃಷ್ಣದೇವ್ ಪ್ರಾರ್ಥಿಸಿದರು. ರಾಣಿ ಮಹೇಶ್ ಸ್ವಾಗತಿಸಿದರು. ಪುಷ್ಪಾ ಶಿವರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಚಂದನಾ ಮತ್ತು ಪ್ರೀತಿ ಅವರು ಭರತನಾಟ್ಯ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement