ಹಂಪಾಪುರ ಮೀನುಗಾರರ ಸಹಕಾರ ಸಂಘಕ್ಕೆ ಆಯ್ಕೆ
ಕೆ.ಆರ್. ನಗರ: ತಾಲೂಕಿನ ಹಂಪಾಪುರ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಕೆ. ಮುದ್ದೇಗೌಡ, ಉಪಾಧ್ಯಕ್ಷರಾಗಿ ಸ್ವಾಮಿನಾಯಕ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 9 ನಿರ್ದೇಶಕರನ್ನು ಹೊಂದಿರುವ ಆಡಳಿತ ಮಂಡಳಿಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿಯಾಗಿದ್ದ ಮಹಮದ್ ರಿಯಾಜ್ ಅವಿರೋಧ ಆಯ್ಕೆ ಪ್ರಕಟಿಸಿದರು. ಸಭೆಯಲ್ಲಿ ನಿರ್ದೇಶಕರಾದ ಸಿದ್ದೇಗೌಡ, ಕೃಷ್ಣೆಗೌಡ, ಪಿ.ಆರ್ಮುಗಂ, ಲಕ್ಷ್ಮಣ, ರಮೇಶ್, ಭಾರತಿ, ಮರದಮ್ಮ ಇದ್ದರು. ನೂತನ ಪದಾಧಿಕಾರಿಗಳನ್ನು ಮುಖಂಡರಾದ ಎಚ್.ಕೆ. ನಾಗರಾಜು, ಶ್ರೀನಿವಾಸ್, ಅಣ್ಣಪ್ಪ, ಪಾಷ ಅಭಿನಂದಿಸಿದರು.
ಇಂದು ದುರ್ಗಾ ಪರಮೇಶ್ವರಿ ರಥೋತ್ಸವ
ಕೆ.ಆರ್. ನಗರ: ತಾಲೂಕಿನ ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಮಾ.11ರಂದು ನಡೆಯಲಿದೆ. ಅಂದು ಮಧ್ಯಾಹ್ನ 12 ರಿಂದ 12ರವರೆಗೆ ಸಲ್ಲುವ ಶುಭ ಅಭಿಜನ್ ಲಗ್ನದಲ್ಲಿ ರಥೋತ್ಸವ ನಡೆಯಲಿದ್ದು, ಇದಕ್ಕಾಗಿ ಸರ್ವ ಸಿದ್ಧತೆಗಳನ್ನು ಕೈಗೊಂಡಿದ್ದು, ದೇವಾಲಯ ಗ್ರಾಮದ ಮಧ್ಯಭಾಗದಲ್ಲಿದ್ದು, ತನ್ನದೆಯಾದ ಇತಿಹಾಸ ಹೊಂದಿರುವ ಕೋಟೆ ದುರ್ಗಿ ಎಂಬ ಹೆಸರಿಂದ ಪ್ರಸಿದ್ಧಿ ಪಡೆದಿರುವ ಶ್ರೀದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.