ಪ್ರೌಢಶಾಲೆ ಕಟ್ಟಡ ಕಾಮಗಾರಿ ಕಳಪೆ
ಕೆ.ಆರ್. ನಗರ: ಶಾಲಾ ಕೊಠಡಿಗಳ ಕಳಪೆ ಕಾಮಗಾರಿಯನ್ನು ವಿರೋಧಿಸಿ ಶಾಲಾಭಿವೃದ್ದಿ ಸಮಿತಿ ಮತ್ತು ಗ್ರಾಮಸ್ಥರು ಕಾಮಗಾರಿ ತಡೆಹಿಡಿದಿರುವ ಘಟನೆ ತಾಲೂಕಿನ ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
26 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೂರು ಶಾಲಾ ಕೊಠಡಿಗಳ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದನ್ನು ಕಂಡ ಶಾಲಾಭಿವೃದ್ಧಿ ಸಮಿತಿಯವರು ಮತ್ತು ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ನಿರ್ಮಿಸುತ್ತಿರುವ ಈ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಯಲ್ಲಿ ಮೊದಲಿಗೆ ತಳಪಾಯವನ್ನು ನಿರ್ಮಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಕಳಪೆ ಸಿಮೆಂಟ್ ಮತ್ತು ಮರಳು ಬಳಸಿ ಕಾಮಗಾರಿ ಮಾಡಿರುವುದರಿಂದ ಮೂರು ದಿನಗಳಲ್ಲೆ ಕಲ್ಲುಗಳು ಕಿತ್ತು ಬಿದ್ದಿದ್ದು, ಸಿಮೆಂಟ್ ಉದುರಿ ಬೀಳುತ್ತಿದೆ. ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಎಂಜಿನಿಯರ್ ಸ್ಥಳದಲ್ಲಿ ಇಲ್ಲದೆ ಇರುವುದರಿಂದ ಗುತ್ತಿಗೆದಾರರು ಇಷ್ಟ ಬಂದಂತೆ ಕಾಮಗಾರಿ ಮಾಡುತ್ತಿದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೃತ್ಯಂಜಯ ದೂರಿದ್ದಾರೆ.
ಶಾಲಾಭಿವೃದ್ಧಿ ಸಮಿತಿಯವರು ಮತ್ತು ಗ್ರಾಮಸ್ಥರು ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಡೆಹಿಡಿದಿದ್ದು, ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಎಂದು ಮುಖ್ಯ ಶಿಕ್ಷಕ ಪ್ರದೀಪ್ ತಿಳಿಸಿದ್ದಾರೆ.