ಆನೆಚೌಕೂರು ಬಳಿ ಅರಣ್ಯಕ್ಕೆ ಬೆಂಕಿ
ಪಿರಿಯಾಪಟ್ಟಣ: ತಾಲೂಕಿನ ಆನೆಚೌಕೂರು ಸಮೀಪದ ಪಿರಿಯಾಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಸಮೀಪದ ವಿರಾಜಪೇಟೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡು ಬೆಲೆ ಕಟ್ಟಲಾಗದ ಅರಣ್ಯ ಸಂಪತ್ತು ಸುಟ್ಟು ಹೋಗಿದೆ.
ಅಗ್ನಿ ಜ್ವಾಲೆಗೆ ಸಣ್ಣಪುಟ್ಟ ಪ್ರಾಣಿಗಳು, ಅಪರೂಪದ ಮರಗಿಡಗಳು ಸುಟ್ಟು ಹೋಗಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿ ನಂದಿಸಲು ಸೂಕ್ತ ಉಪಕರಣಗಳ ಹಾಗೂ ಸಿಬ್ಬಂದಿ ಕೊರತೆ ನಡುವೆಯೂ ಕ್ಯಾನ್ಗಳಲ್ಲಿ, ಡ್ರಂಗಳಲ್ಲಿ ನೀರನ್ನು ಕೊಂಡೊಯ್ದು ಬೆಂಕಿ ನಂದಿಸಲು ಪರದಾಡುತ್ತಿದ್ದಾರೆ. ಆಧುನಿಕತೆ ಬೆಳೆದಂತೆ ಮಾನವ ತನ್ನ ಅನುಕೂಲಕ್ಕಾಗಿ ಏನೆಲ್ಲ ಮಾಡುತ್ತಿದ್ದಾನೆ. ಆದರೆ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ತಾರತಮ್ಯ ತೋರುತ್ತಿದ್ದಾನೆಯೇ ಎಂಬ ಪ್ರಶ್ನೆ ಅಗ್ನಿ ನಂದಿಸಲು ಶ್ರಮಿಸುತ್ತಿರುವ ಸಿಬ್ಬಂದಿಯನ್ನು ಗಮನಿಸಿದರೆ ಯಾರಿಗಾದರೂ ಅನಿಸದೇ ಇರದು.
ಅರಣ್ಯ ಇಲಾಖೆಯಲ್ಲಿ ತುರ್ತು ಸಂದರ್ಭಗಳು ಸೇರಿದಂತೆ ಸಾಮಾನ್ಯ ದಿನಗಳಲ್ಲಿಯೂ ಅಗತ್ಯ ಎನಿಸುವ ಸೌಲಭ್ಯಗಳ, ಅಗತ್ಯ ಪರಿಕರಗಳ ಕೊರತೆ ಕಾಡುತ್ತಿದೆ. ಹಸಿ ಎಲೆಗಳಿಂದ ತುಂಬಿದ ರೆಂಬೆ ಕೊಂಬೆಗಳನ್ನು ಹಿಡಿದು ಬೆಂಕಿ ನಂದಿಸುವ ಪ್ರಯತ್ನದಲ್ಲಿರುವ ಸಿಬ್ಬಂದಿ ಕೈಯಲ್ಲಿ ಯಾವುದೆ ಅತ್ಯಾಧುನಿಕ ಉಪಕರಣಗಳಿಲ್ಲದಿರುವುದನ್ನು ಗಮನಿಸಿದರೆ ನಾವು ಇನ್ನೂ ಎಷ್ಟು ಶತಮಾನಗಳಷ್ಟು ಹಿಂದಿದ್ದೇವೆ ಎನಿಸುತ್ತದೆ.
ರಾಜ್ಯದಲ್ಲಿ ಹೇರಳ ಅರಣ್ಯ ಸಂಪತ್ತಿದ್ದು, ಪ್ರತಿ ವರ್ಷ ಬೆಂಕಿಯಿಂದಾಗಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂದು ಹೋಗುತ್ತಿದ್ದು, ಇದರೊಂದಿಗೆ ಅನೇಕ ವನ್ಯ ಜೀವಿಗಳೂ ನಶಿಸುತ್ತಿವೆ. ಸರ್ಕಾರಗಳು ಹೆಚ್ಚು ಅರಣ್ಯ ಪ್ರದೇಶಗಳಿರುವ ಜಿಲ್ಲೆಗಳಿಗೆ ಒಂದರಂತೆ ಬೇಸಿಗೆಯ ಸಂದರ್ಭದಲ್ಲಿ ಹೆಲಿಕ್ಯಾಪ್ಟರ್ ವ್ಯವಸ್ಥೆ ಕಲ್ಪಿಸಿದಲ್ಲಿ ಹೆಚ್ಚಿನ ಬೆಂಕಿ ಅನಾಹುತ ತಡೆಯಬಹುದಾಗಿದೆ.
ಅಲ್ಲದೆ ಆಧುನಿಕ ಮರ ಕತ್ತರಿಸುವ ಹ್ಯಾಂಡ್ ಮಿಷನ್ಗಳನ್ನು, ಅರಣ್ಯ ಪ್ರದೇಶದ ಒಳಗೆ ಸುಲಲಿತವಾಗಿ ಪ್ರಯಾಣಿಸಲು ಸಾಧ್ಯವಾಗುವ ಟ್ರಾಕ್ಟರ್ನಂಥ ವಾಹನಗಳ ಮತ್ತು ನೀರಿನ ಟ್ಯಾಂಕರ್ಗಳ ವ್ಯವಸ್ಥೆ ಕಲ್ಪಿಸಿ, ಖಾಲಿ ಇರುವ ಸಿಬ್ಬಂದಿಯನ್ನು ಬೇಗನೆ ಭರ್ತಿ ಮಾಡಬೇಕಿದೆ.
ಬೆಂಕಿ ನಂದಿಸಲು ಅಧಿಕಾರಿಯ ಕ್ರಮ
ಪಿರಿಯಾಪಟ್ಟಣ: ಸರ್ಕಾರಿ ಕೆಲಸ ಎಂದರೆ ಸಾಮಾನ್ಯವಾಗಿ ಅಧಿಕಾರಿಗಳು, ಸಿಬ್ಬಂದಿ ತಮ್ಮ ಪಾಲಿನ ಕೆಲಸವನ್ನೂ ಸರಿಯಾಗಿ ಮಾಡುವುದಿಲ್ಲ. ಇನ್ನೂ ಹೆಚ್ಚುವರಿ ಕೆಲಸವನ್ನಾಗಲೀ ಅಥವಾ ತಮ್ಮ ವ್ಯಾಪ್ತಿಗೆ ಮೀರಿದ ಕೆಲಸವನ್ನಂತೂ ಎಂದಿಗೂ ಮಾಡುವುದಿಲ್ಲ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಇದಕ್ಕೆ ಅಪವಾದ ಎಂಬಂಥ ಸರ್ಕಾರಿ ಅಧಿಕಾರಿಯೊಬ್ಬರು ಇಲ್ಲಿದ್ದಾರೆ.
ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್. ಚಿಣ್ಣಪ್ಪ ವಿಶೇಷ ವ್ಯಕ್ತಿತ್ವ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿ ಇಟ್ಟುಕೊಂಡು ಇತರೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾದರಿ ಎಂಬಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳಿಂದ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಬ್ಬಿರುವ ಬೆಂಕಿ ನಂದಿಸಲು ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿರುವುದು ತಿಳಿದಿರುವ ವಿಷಯ. ಆದರೆ ಮುಂಜಾಗ್ರತಾ ಕ್ರಮವಾಗಿ ತಮ್ಮ ಅರಣ್ಯ ಪ್ರದೇಶಕ್ಕೆ ಯಾವುದೇ ರೀತಿಯ ಬೆಂಕಿ ತಗುಲದಂತೆ ತಮ್ಮ ವ್ಯಾಪ್ತಿಯಿಂದ ಹೊರಗಿನ ಪ್ರದೇಶದಲ್ಲಿ ಹಬ್ಬಿರುವ ಬೆಂಕಿಯನ್ನು ನಂದಿಸುವ ಮೂಲಕ ಅರಣ್ಯ ರಕ್ಷಣೆಗೆ ಪಣ ತೊಟ್ಟಿದ್ದಾರೆ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ. ತಾಲೂಕಿನ ಆನೆ ಚೌಕೂರು ಸಮೀಪ ಪಿರಿಯಾಪಟ್ಟಣ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ವಿರಾಜಪೇಟೆ ವಿಭಾಗದ ತಿತಿಮತ್ತಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ಅಲ್ಲಿಂದ ಕೆಲವು ಕಿಮೀ ದೂರದಲ್ಲಿರುವ ಪಿರಿಯಾಪಟ್ಟಣ ವಲಯ ಅರಣ್ಯಕ್ಕೆ ಬೆಂಕಿ ತಗಲುವ ಸಾಧ್ಯತೆಗಳನ್ನು ಗಮನಿಸಿದ ಎಂ.ಎಸ್. ಚಿಣ್ಣಪ್ಪ ತಮ್ಮ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಟ್ಟಿಕೊಂಡು ವಿರಾಜಪೇಟೆ ಅರಣ್ಯ ಪ್ರದೇಶ ತಮ್ಮ ವ್ಯಾಪ್ತಿ ಅಲ್ಲ ಎಂಬುದನ್ನೂ ಲೆಕ್ಕಿಸದೆ ಅರಣ್ಯ ಪ್ರದೇಶದ ಅತ್ಯಮೂಲ್ಯ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಸರ್ಕಾರ ಇಂಥ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವ ಕೆಲಸಕ್ಕೆ ಮುಂದಾಗುವ ಮೂಲಕ ಅವರ ಕರ್ತವ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಇಲಾಖೆ ಸಿಬ್ಬಂದಿ ಹಾಗೂ ಕೆಲವು ಅರಣ್ಯ ಪ್ರದೇಶದ ಹಾಡಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.