ಕ್ರೀಡಾ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲು ಆಗ್ರಹ
ಹುಣಸೂರು: ವಿದ್ಯಾರ್ಥಿಗಳು ಕ್ರೀಡೆಯಿಂದ ಮಾನಸಿಕ ಸ್ವಾಸ್ಥ್ಯ, ದೈಹಿಕ ಆರೋಗ್ಯದ ಜೊತೆಗೆ ನಾಯಕತ್ವದ ಗುಣವನ್ನು ಕಲಿಸುತ್ತದೆ. ಶೈಕ್ಷಣಿಕ ವಿಭಾಗಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನೇ ಕ್ರೀಡಾ ಕ್ಷೇತ್ರಕ್ಕೂ ನೀಡಬೇಕೆಂದು ಮೈಸೂರು ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ. ವೆಂಕಟೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, 12ನೇ ಹಣಕಾಸು ಆಯೋಗದಲ್ಲಿ ಕ್ರೀಡೆಗಾಗಿ ಅತಿ ಹೆಚ್ಚು ಆರ್ಥಿಕ ಹಾಗೂ ಕ್ರೀಡಾ ಸಲಕರಣೆಗಳನ್ನು ನೀಡುವ ಸೌಲಭ್ಯ ಕಲ್ಪಿಸಿದೆ. ಆದರೂ ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಕ್ರೀಡೆಗೆ ನೀಡುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಪೋಷಕರು ಹಾಗೂ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಕಾರಣಗಳು ಇರುತ್ತವೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಪ್ರೊ.ಎಂ.ಆರ್. ಸೌಭಾಗ್ಯ ಮಾತನಾಡಿದರು. ಸಿಡಿಸಿ ಹಿರಿಯ ಸದಸ್ಯ ಗೋವಿಂದರಾಜ ಗುಪ್ತ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಪುಟ್ಟಶೆಟ್ಟಿ, ಅಧ್ಯಾಪಕರಾದ ಜ್ಞಾನಪ್ರಕಾಶ್, ಬಿ.ಎನ್. ನಾಗರಾಜ್, ರಾಜೇಶ್ವರಿ, ನಾಗಣ್ಣ ಇದ್ದರು.
ಕಪ್ಪಡಿಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಡಾರ್ಮೆಟರಿ
ಕೆ.ಆರ್. ನಗರ: ತಾಲೂಕಿನ ಕಪ್ಪಡಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 68 ಲಕ್ಷ ವೆಚ್ಚದಲ್ಲಿ ಡಾರ್ಮೆಟರಿ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಕಪ್ಪಡಿ ಮಠಾಧಿಪತಿ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಹೇಳಿದರು. ಮಹಾ ಶಿವರಾತ್ರಿ ಹಬ್ಬದಿಂದ ಆರಂಭವಾಗುವ ಕಪ್ಪಡಿ ಜಾತ್ರೆ ಯುಗಾದಿ ಅಮವಾಸ್ಯೆವರೆಗೆ ನಡೆಯಲಿದ್ದು, ಪ್ರಸಕ್ತ ವರ್ಷ ಸಾರ್ವಜನಿಕರ ಅನುಕೂಲಕ್ಕಾಗಿ ಸ್ನಾನಗೃಹ ಮತ್ತು ಮಹಿಳೆಯರಿಗೆ ವಸ್ತ್ರ ಬದಲಾವಣೆಯ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ ಎಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಠದ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸ್ಥಳೀಯರು ಮತ್ತು ಬೊಪ್ಪೇಗೌಡನಪುರದ ಮಠಾಧೀಶರೊಂದಿಗೂ ಚರ್ಚಿಸಿ ಅದಕ್ಕೂ ಹೆಚ್ಚು ಗಮನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಮುಂದಿನ ಜಾತ್ರೆಯೊಳಗೆ ಹೆಚ್ಚುವರಿ 6 ಕೊಠಡಿಗಳನ್ನು ನಿರ್ಮಿಸಲಾಗುತ್ತದೆಯಲ್ಲದೆ, ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ದಾನಿಗಳ ನೆರವು ಪಡೆದು ಅವರ ಸಲಹೆ ಸಹಕಾರ ಪರಿಗಣಿಸಿ ವರ್ಷದಿಂದ ವರ್ಷಕ್ಕೆ ಜಾತ್ರೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಪ್ರಯತ್ನಿಸಲಾಗುತ್ತದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ
ಮೈಸೂರು: ಮಹಾರಾಷ್ಟ್ರದ ನಾಸಿಕ್ನ ಕುಸುಮಾಗ್ರಾಜ್ ಸಾಮಕ್ ಸಭಾಂಗಣದಲ್ಲಿ ಮಾ. 20ರಿಂದ 23ರವರೆಗೆ ನಡೆಯಲಿರುವ 6ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕೆ. ಗೋಪಿನಾಥ್ ರಚನೆ, ನಿರ್ಮಾಣ ಮತ್ತು ನಿರ್ದೇಶನದ 30 ನಿಮಿಷಗಳ ಕನ್ನಡ ಕಿರುಚಿತ್ರ ನೆಮ್ಮದಿ ಆಯ್ಕೆಯಾಗಿದೆ. ಮನುಷ್ಯನ ಜೀವನ ಶೈಲಿ, ಆರೋಗ್ಯ ಮತ್ತು ಅಕ್ಷರದ ಮಹತ್ವದ ಕಥೆ ಕುರಿತು ನಿರ್ಮಿಸಿದ ನೆಮ್ಮದಿ ಕನ್ನಡ ಕಿರುಚಿತ್ರಕ್ಕೆ ಮುಖ್ಯ ತಾರಾಗಣದಲ್ಲಿ ಆರ್ಯಭಟ ಪ್ರಶಸ್ತಿ ವಿಜೇತ ಬಾಲಸುಬ್ರಮಣ್ಯ ಮತ್ತು ರೂಪಾ ಅಭಿನಯಿಸಿದ್ದಾರೆ.