'ನಷ್ಟದಲ್ಲಿರುವ ಸಹಕಾರ ಬ್ಯಾಂಕ್ ಪುನಶ್ಚೇತನ'
ಮೈಸೂರು: ಬೆಂಗಳೂರಿನ ಗಾಂಧಿ ಬಜಾರ್ನ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಮೈಸೂರಿನ ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿ ಜ್ಞಾನಗಂಗಾ ಶಾಲೆ ಎದುರು ಆರಂಭಿಸಿದ 13ನೇ ಶಾಖೆ ಹಾಗೂ ಎಟಿಎಂ ಅನ್ನು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಹಕಾರ ಕ್ಷೇತ್ರದ ಕೆಲವು ಬ್ಯಾಂಕುಗಳು ನಷ್ಟದಲ್ಲಿವೆ. ಅವುಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಕೆಲವು ಅವ್ಯವಹಾರದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸಹಕಾರ ಕಾನೂನಿಗೆ ತಿದ್ದುಪಡಿ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.
ಮಾಜಿ ಸಂಸದ ಟಿ.ಆರ್.ಶಾಮಣ್ಣ, ವೈ.ವಿ. ಕೃಷ್ಣಮೂರ್ತಿ, ವಿ.ಎಸ್. ಕೃಷ್ಣ ಅಯ್ಯರ್ ಅವರು 1976ರ ಫೆ.29 ರಂದು ಬೆಂಗಳೂರಿನಲ್ಲಿ ದಿ ನ್ಯಾಷನಲ್ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸ್ಥಾಪಿಸಿದರು. ರಾಜ್ಯದ 267 ಸಹಕಾರ ಬ್ಯಾಂಕುಗಳಲ್ಲಿ ಈ ಬ್ಯಾಂಕ್ 3ನೇ ಸ್ಥಾನದಲ್ಲಿದೆ ಎಂದರು.