ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಛಾಯಾಪತಿ ಹೆಮ್ಮೆಯ ಪ್ರಕಾಶಕರು

Srinivasa Murthy VN
Updated On : 10 May 2014, 11:48 am

ಕ.ಪ್ರ.ವಾರ್ತೆ ಮೈಸೂರು ಮೇ 10
ನಾಡು ಕಂಡ ಅತ್ಯುತ್ತಮ ಪ್ರಕಾಶಕರಲ್ಲಿ ಟಿ.ಎಸ್.ಛಾಯಾಪತಿ ಅವರು ಕೂಡ ಒಬ್ಬರು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.
ಟಿ.ಎಸ್.ಛಾಯಾಪತಿ ಎಪ್ಪತ್ತರ ಅಭಿನಂದನ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಭಿನಂದನ ಸಂಪುಟ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಛಾಯಾಪತಿ ಎಂ.ಕಾಂ ಓದಿದ್ದರು ಸಹ ಸಾಹಿತ್ಯ ಕ್ಷೇತ್ರವನ್ನೇ ಆರಿಸಿಕೊಂಡರು. ತಮ್ಮ ತಂದೆಯವರ ಆಶಯದಂತೆ ಪ್ರಕಾಶನ ಆರಂಭಿಸಿ ಅತ್ಯುತ್ತಮ ಕೃತಿ ಹೊರತಂದಿದ್ದಾರೆ ಎಂದರು.
ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ವಿದ್ಯಾರ್ಥಿಯಾಗಿದ್ದಾಗ ಅನೇಕ ಕಷ್ಟ ಅನುಭವಿಸುತ್ತಿದ್ದರು. ಅವರನ್ನು ಗುರುತಿಸಿ ಆರ್ಥಿಕ ಸಹಾಯ ಮಾಡಿದ ತ.ಸು. ಶಾಮರಾಯರು ಅನೇಕ ವಿದ್ಯಾರ್ಥಿಗಳನ್ನು ಪೋಷಿಸಿದರು. ಅದೇ ವಿದ್ಯಾರ್ಥಿ ಎದೆತುಂಬಿ ಹಾಡುವೆನು ಗೀತೆ ರಚಿಸಿ, ಮೈಸೂರು ಅನಂತಸ್ವಾಮಿಯವರು ಸಂಗೀತ ಸಂಯೋಜಿಸಿದ್ದನ್ನು ಕೇಳಿದ ತ.ಸು. ಶಾಮರಾಯರು ಆನಂದಪಟ್ಟಿದ್ದರು. ಈ ವಿಚಾರವನ್ನು ಛಾಯಾಪತಿ ನನಗೆ ತಿಳಿಸಿದಾಗ ಎಲ್ಲಿಲ್ಲದ ಖುಷಿಯಾಯಿತು. ಹಾಗೆ ಅವರೊಂದಿಗೆ ಒಡನಾಟ ಹೊಂದಿದ್ದೇನೆ ಎಂದರು.
ಸಿಕ್ಕಾಗ ಚರ್ಚಿಸುತ್ತಿದ್ದರು: ಹಲವು ಸಮಾರಂಭಗಳಲ್ಲಿ ನಾನು ಮಾಡಿದ ಭಾಷಣವನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದ ಛಾಯಾಪತಿಯವರು ಎಲ್ಲಾದರೂ ಸಿಕ್ಕಾಗ ಚರ್ಚಿಸುತ್ತಿದ್ದರು. ಕೊನೆಗೆ ಮಾಧ್ಯಮದಲ್ಲಿ ಶ್ರೀನಿವಾಸಪ್ರಸಾದ್ ಎಂಬ ಕೃತಿಯನ್ನು ಹೊರತಂದರು. ಅದು ನನಗೆ ಆಶ್ಚರ್ಯ ಮೂಡಿಸಿತು. ಈವರೆಗೆ ಹಲವು ಲೇಖಕರನ್ನು ಬೆಳೆಸಿದ್ದಾರೆ. ಕನ್ನಡ ಭಾಷೆ ಬೆಳವಣಿಗೆಗೆ ಪ್ರಕಾಶಕರ ಕೊಡುಗೆ ಅನನ್ಯವಾದದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದರಷ್ಟೇ ಸಾಲದು. ಬದಲಾಗಿ ಕನ್ನಡ ಭಾಷೆ ಬೆಳೆಯಲು ಗುಣಮಟ್ಟದ ಕೃತಿಗಳ ಸಂಖ್ಯೆಯೂ ಅವಶ್ಯಕವಾಗಿದೆ. ಅದನ್ನು ನಾಡಿನ ಪ್ರಕಾಶಕರು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ಟಿ.ಎಸ್. ಛಾಯಾಪತಿ ಮತ್ತು ಸುಷ್ಮಾ ಛಾಯಾಪತಿ ದಂಪತಿಯನ್ನು ಅಭಿನಂದಿಸಲಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಡಾ.ನೀಲಗಿರಿ ಎಂ.ತಳವಾರ್ ಕೃತಿ ಕುರಿತು ಮಾತನಾಡಿದರು. ಸಂಸ್ಕೃತ ವಿವಿ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು. ರಾಜಶೇಖರ ಕದಂಬ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement