ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೈಲಿನಿಂದ ಮೂವರು ಪಿಜಿಗೆ!

Srinivasa Murthy VN
Updated On : 11 May 2014, 12:28 pm

-ಬಿ. ಶೇಖರ್ ಗೋಪಿನಾಥಂ
ಮೈಸೂರು: ಮಾಡಿದ ತಪ್ಪಿಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದ ಮೂವರು ಕೈದಿಗಳು ತಮ್ಮ ಪರಿಶ್ರಮದಿಂದ ಈಗ ಸ್ನಾತಕೋತ್ತರ ಪದವೀಧರರಾಗಿದ್ದಾರೆ.
ಹೌದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರ್.ಅರವಿಂದ್ ಎಂಎಲ್‌ಎಸ್ಸಿ (ಗ್ರಂಥಾಲಯ ವಿಜ್ಞಾನ) ವಿಷಯದಲ್ಲಿ 6ನೇ ರ್ಯಾಂಕ್ ಪಡೆದಿದ್ದಾರೆ. ಎಂಎ ರಾಜ್ಯಶಾಸ್ತ್ರದಲ್ಲಿ ಕೆ.ಎಸ್. ಡಿಲಕ್ಸ್ ಶೇ.64 ಮತ್ತು ಸತೀಶ್‌ಗೌಡ ಶೇ.60 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಈ ಮೂರು ಜೈಲು ಹಕ್ಕಿಗಳಿಗೆ ಓದುವ ಅವಕಾಶ ಕಲ್ಪಿಸಿದ್ದು ಕರ್ನಾಟಕ ರಾಜ್ಯ ಮುಕ್ತ ವಿವಿ. ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಶನಿವಾರ ನಡೆದ 14ನೇ ಘಟಿಕೋತ್ಸವದಲ್ಲಿ ಈ ಮೂರು ಜೈಲು ಹಕ್ಕಿಗಳು ಪದವಿ ಸ್ವೀಕರಿಸಿದರು. ಅರವಿಂದ್ ಪ್ರಸ್ತುತ ಬೆಂಗಳೂರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ಡಿಲಕ್ಸ್ ಮತ್ತು ಸತೀಶ್‌ಗೌಡ ಮೈಸೂರು ಕೇಂದ್ರ ಕಾರಾಗೃಹದ ಸಹಪಾಠಿಗಳು.
ಹಾಸನ ಸಕಲೇಶಪುರದ ಡಿಲಕ್ಸ್ ಮತ್ತು ಮೈಸೂರಿನ ಕೆ.ಆರ್. ನಗರ ತಾಲೂಕು ಭೇರ್ಯದ ಸತೀಶ್‌ಗೌಡ ತಪ್ಪು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿದ್ದರು. ಈ ಇಬ್ಬರಿಗೂ ಬೇರೆ ಬೇರೆ ಅಪರಾಧ ಹಿನ್ನೆಲೆಯಲ್ಲಿ ಶಿಕ್ಷೆಯಾಗಿತ್ತು. ಜೈಲಿನಲ್ಲಿದ್ದ ಈ ಇಬ್ಬರಿಗೂ ಓದುವ ಹಂಬ ಇತ್ತು. ಇದಕ್ಕೆ ರಾಜ್ಯ ಮುಕ್ತ ವಿವಿ ಅವಕಾಶ ಕಲ್ಪಿಸಿತ್ತು. ಹೀಗಾಗಿ ಡಿಲಕ್ಸ್ ಮತ್ತು ಸತೀಶ್‌ಗೌಡ ಜೈಲಿನಲ್ಲಿದ್ದುಕೊಂಡೇ ಬಿಎ (ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ) ಓದಿ ಉತ್ತೀರ್ಣರಾಗಿದ್ದರು. ಬಳಿಕ ಎಂಎ ರಾಜ್ಯಶಾಸ್ತ್ರ ಓದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಘಟಿಕೋತ್ಸವಕ್ಕೆ ಹಾಜರಾಗಿದ್ದರು.
ಜೈಲಿನಲ್ಲಿದ್ದುಕೊಂಡು ಪರೀಕ್ಷೆ ತೆಗೆದುಕೊಂಡ ಮೇಲೆ ಬೆಳಗ್ಗೆ 5 ರಿಂದ 7, ರಾತ್ರಿ 8 ರಿಂದ 10.30 ರವರೆಗೆ ಓದುತ್ತಿದ್ದೆವು. ಉಳಿದ ಸಮಯದಲ್ಲಿ ಕೆಲಸ ಇರುತ್ತಿತ್ತು. ಪರೀಕ್ಷೆ ಹತ್ತಿರ ಬಂದಾಗ ಜೈಲು ಸಿಬ್ಬಂದಿ ಓದಿಕೊಳ್ಳಲು ಅವಕಾಶ ಕೊಡುತ್ತಿದ್ದರು. ಹೀಗಾಗಿ ಉತ್ತಮ ಅಂಕ ಪಡೆಯಲು ಅವಕಾಶವಾಯಿತು. ಮನೆಯಲ್ಲಿದ್ದಾಗ ಅಪ್ಪ ಅಮ್ಮ ಮಾತು ಕೇಳಲಿಲ್ಲ. ಜೈಲು ಸೇರಿದ ಮೇಲಾದರೂ ಓದಬೇಕೆಂಬ ಅಪ್ಪ ಅಮ್ಮ ಆಸೆ ಈಡೇರಿಸಲು ಓದಿದ್ದಾಗಿ ಡಿಲಕ್ಸ್ ಮತ್ತು ಸತೀಶ್‌ಗೌಡ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement