ಸವಾಲು ಎದುರಿಸುವ ಶಕ್ತಿ ವೃದ್ಧಿಸಿಕೊಳ್ಳಿ
ಕ.ಪ್ರ.ವಾರ್ತೆ ಮೈಸೂರು ಮೇ 10
ಮನುಷ್ಯ ಪ್ರಗತಿ ಸಾಧಿಸಲು ವಿದ್ಯಾಭ್ಯಾಸದ ನಂತರ ಬರುವ ವಿಭಿನ್ನ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳಬೇಕು ಎಂದು ಮೆರಿಟೋರ್ ಕಮರ್ಷಿಯಲ್ ವೆಹಿಕಲ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎನ್.ಪಿ. ತಿಮ್ಮಯ್ಯ ಹೇಳಿದರು.
ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ವೇದಿಕೆಯ 2013-14ನೇ ಸಾಲಿನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶೈಕ್ಷಣಿಕ ವಾರ್ತಾ ಪತ್ರಿಕೆ ವಿವಿಪಿಜಿಸಿ-ಇಮೇಜ್ 2ನೇ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಸವಾಲುಗಳು ಸಂಪೂರ್ಣ ಬಾಹ್ಯ ಸವಾಲುಗಳಾಗಿವೆ ಮತ್ತು ನಮ್ಮ ನಿಯಂತ್ರಣದಲ್ಲಿರುವುದಿಲ್ಲ, ಆದರೆ ವಿದ್ಯಾರ್ಜನೆ ಹಂತದಲ್ಲಿ ಬರುವ ಸವಾಲುಗಳು ಆಂತರಿಕವಾಗಿದ್ದು, ನಿಯಂತ್ರಣಕ್ಕೊಳಪಟ್ಟಿರುತ್ತದೆ. ಬಾಹ್ಯ ಸವಾಲುಗಳನ್ನು ಎದುರಿಸಲು ಎರಡು ಪ್ರಮುಖ ಅಂಶಗಳಾದ ನಿಷ್ಕರ್ಷಣೆ ಮತ್ತು ಪರಿಶ್ರಮವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ. ಇವುಗಳ ಜೊತೆಗೆ ಸಂವಹನ, ಗಂಡಾಂತರಗಳನ್ನು ಸ್ವೀಕರಿಸುವ ಸಾಮರ್ಥ್ಯ, ಗುರುತಿಸಿಕೊಳ್ಳುವ ಪ್ರವೃತ್ತಿ, ನಿರಂತರ ಕಲಿಕೆ ಹಾಗೂ ಸಕಾರಾತ್ಮಕ ಮನೋಭಾವ ಎಂಬ ಐದು ಮೂಲಭೂತ ಅಂಶಗಳು ಯಶಸ್ಸಿನ ತಳಹದಿಯಾಗುತ್ತವೆ ಎಂದು ವಿವರಿಸಿದರು.
ಲೆಕ್ಕಶಾಸ್ತ್ರ ಸಿದ್ಧಾಂತ ವಿಷಯದಲ್ಲಿ ಹಾಗೂ ತೆರಿಗೆ ನಿರ್ವಹಣಶಾಸ್ತ್ರ ವಿಷಯದಲ್ಲಿ ರ್ಯಾಂಕ್‌ಗಳಿಸಿದ ವಿದ್ಯಾರ್ಥಿಗಳಾದ ಕೆ. ನಿಜೀಶ್ ಹಾಗೂ ಸಜ್ಜದ್ ಅಹಮದ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಸಂಸ್ಥೆಯ ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮೀನಾರಾಯಣ್, ಪ್ರಾಂಶುಪಾಲ ಡಾ.ಎನ್. ಶಂಕರ್ ಅವರು ವಿದ್ಯಾರ್ಥಿಗಳ ಸಾಮರ್ಥ್ಯಾಭಿವೃದ್ಧಿ ಬಗ್ಗೆ ತಿಳಿವಳಿಕೆ ನೀಡಿದರು. ವಿಭಾಗದ ಮುಖ್ಯಸ್ಥ ಡಾ.ಎಸ್.ಮರೀಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಎಂ.ಬಿ. ನಯನ ಪ್ರಾರ್ಥಿಸಿದರು. ಗೌರವ್ ಸ್ವಾಗತಿಸಿದರು. ಕೆ.ಪಿ. ದಿವ್ಯಾ ವಂದಿಸಿದರು. ಲತಾಶ್ರೀ ಹಾಗೂ ಸೈಯದಾ ಹನಿ ನಿರೂಪಿಸಿದರು.