ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉಸಿರು ರಕ್ಷಕ ಮರ ಕಡಿಯದಿರಿ

Srinivasa Murthy VN
Updated On : 19 May 2014, 11:56 am

ಕ.ಪ್ರ.ವಾರ್ತೆ ಮೈಸೂರು ಮೇ 19
ಕುಕ್ಕರಹಳ್ಳಿ ಕೆರೆ ಆವರಣದ 384 ಮರಗಳನ್ನು ಕತ್ತರಿಸದಂತೆ ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಅವರಿಗೆ ಸೋಮವಾರ ಆಕ್ಷೇಪಣಾ ಅರ್ಜಿ ಸಲ್ಲಿಸಿದರು.
ನಗರ ಪಾಲಿಕೆ ಹೊಸದಾಗಿ ನಿರ್ಮಿಸುತ್ತಿರುವ ಒಳಚರಂಡಿ ಕಾಮಗಾರಿಯ ಪೈಪ್‌ಲೈನ್ ಅಳವಡಿಕೆಗೆ ಸುಮಾರು 384 ಮರಗಳನ್ನು ಕತ್ತರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಈ ಆಕ್ಷೇಪಣಾ ಅರ್ಜಿ ಸಲ್ಲಿಸುತ್ತಿದ್ದೇವೆ. ನಗರಕ್ಕೆ ಕುಕ್ಕರಹಳ್ಳಿ ಕೆರೆಯು ಶ್ವಾಸಕೋಶವಾಗಿ ಕೆಲಸ ಮಾಡುತ್ತಿದೆ. ಮರಗಳಿಂದಲೆ ಕೆರೆಯ ಸಂರಕ್ಷಣೆ ಆಗುತ್ತಿದೆ. ಆದರೂ ಮರಗಳನ್ನು ಬರಿದು ಮಾಡಿ ಕೆರೆಯನ್ನು ಕೇವಲ ಒಂದು ಈಜುಗೊಳವಾಗಿ ನಿರ್ಮಿಸಲು ಹೊರಟಿರುವುದು ದೊಡ್ಡ ಅಪರಾಧ ಎಂದು ದೂರಿದರು.
ಈ ಹಿಂದೆ ಮೈಸೂರು ವಿವಿಯು 5 ಕೋಟಿ ವೆಚ್ಚದಲ್ಲಿ ಪರಿಸರ ಸೂಕ್ಷ್ಮ ಉದ್ಯಾನ ನಿರ್ಮಿಸಲು ಅಲ್ಲಿದ್ದ ಸುಮಾರು 500 ಮರ ಕತ್ತರಿಸಲಾಯಿತು. ಆದರೆ ಉದ್ಯಾನವನ ಮಾತ್ರ ನಿರ್ಮಾಣ ಆಗಲಿಲ್ಲ. ಈಗ ಒಳಚರಂಡಿ ಪೈಪ್‌ಲೈನ್ ಅಳವಡಿಕೆಗೆ ಮರ ಕಡಿಯಲಾಗುತ್ತಿದೆ. ಆದ್ದರಿಂದ ಹಾಲಿ ಇರುವ ಮಾರ್ಗದಲ್ಲೆ ಪೈಪ್‌ಲೈನ್ ಅಳವಡಿಸಬೇಕು. ಜೆಸಿಬಿ ಮತ್ತು ಇತರೆ ದೊಡ್ಡ ಗಾತ್ರದ ಕ್ರೇನ್‌ಗಳಿಂದ ಕಾಮಗಾರಿ ನಡೆಸಿದರೆ ಮರ ಕಡಿಯಬೇಕಾಗುತ್ತದೆ. ಆದ್ದರಿಂದ ಮಾನವ ಸಂಪನ್ಮೂಲ ಬಳಸಿ ಕೆಲಸ ಮಾಡಿಸಬೇಕು. ಒಳಚರಂಡಿ ಪೈಪ್‌ಲೈನ್ ಕಾಮಗಾರಿಗೆ ಯಾವುದೆ ತಕರಾರಿಲ್ಲ. ಆದರೆ ಮರ ಕಡಿಯದೆ ಕಾಮಗಾರಿ ಮಾಡಿಸಬೇಕು. ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಮರ ಕಡಿಯಲು ಕರ್ನಾಟಕ ಮರಗಳ ಸಂರಕ್ಷಣ ಕಾಯ್ದೆಯಡಿ ಅವಕಾಶ ಇಲ್ಲ ಎಂದು ತಿಳಿಸಿದರು.
ಪೈಪ್‌ಲೈನ್ ಮಾರ್ಗ ಬದಲು: ನಗರ ಪಾಲಿಕೆ ಒಳಚರಂಡಿ ವಿಭಾಗದ ಇಇ ಎಸ್.ಎಸ್. ರಾಜಗೋಪಾಲ್ ಮಾತನಾಡಿ, ನಾವು ಹಳೆಯ ಪೈಪ್‌ಲೈನ್ ಮಾರ್ಗದಲ್ಲಿ ಕಾಮಗಾರಿ ನಡೆಸುತ್ತಿಲ್ಲ. ಅದರ ಪಕ್ಕದಲ್ಲಿ ಹೊಸದಾಗಿ ಪೈಪ್ ಲೈನ್ ಅಳವಡಿಕೆಗೆ ಯೋಜನೆ ರೂಪಿಸಿದ್ದೇವೆ. ಆದ್ದರಿಂದ ಮರ ಕಡಿಯಬೇಕಿದೆ. ನಾವೆ ಆ ಮಾರ್ಗದಲ್ಲಿ 384 ಮರ ಬರುವುದಾಗಿ ಮೈಸೂರು ವಿವಿಗೆ ತಿಳಿಸಿದ್ದೇವೆ. ಅವರು ಸಾರ್ವಜನಿಕ ಸಭೆ ಕರೆದು, ಅರಣ್ಯ ಇಲಾಖೆ ಅನುಮತಿ ಪಡೆದು ಮರ ಕಡಿಯುತ್ತಿರುವುದಾಗಿ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಹೊಸ ಪೈಪ್‌ಲೈನ್ ಮಾರ್ಗದ ಬದಲು ಹಳೆಯ ಪೈಪ್ ತೆಗೆದು ಹೊಸ ಪೈಪ್ ಅಳವಡಿಸಿದರೆ ಹೊಸ ಮಾರ್ಗದ ಅಗತ್ಯ ಇರುವುದಿಲ್ಲ. ಅಲ್ಲದೆ 384 ಮರಗಳು ಉಳಿಯುತ್ತವೆ. ಈ ಬಗ್ಗೆ ನಗರ ಪಾಲಿಕೆ ಯೋಚಿಸಬೇಕು ಎಂದರು. ನಂತರ ನಗರ ಪಾಲಿಕೆ ಅಧಿಕಾರಿಗಳು ಮತ್ತು ಎಸಿಐಸಿಎಂ ಪದಾಧಿಕಾರಿಗಳು ಒಮ್ಮೆ ಸ್ಥಳ ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ರಾಜಗೋಪಾಲ್ ಸಭೆಗೆ ತಿಳಿಸಿದರು.
ಟ್ರೀ ಅಥಾರಿಟಿ ತಿಳಿದಿಲ್ಲ: ನಗರ ಪಾಲಿಕೆಯ ಮೇಯರ್ ನೇತೃತ್ವದಲ್ಲಿ ಟ್ರೀ ಅಥಾರಿಟಿ ಅಸ್ತಿತ್ವದಲ್ಲಿದೆ ಎಂಬುದು ಸ್ವತಃ ನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳಿಗೆ ತಿಳಿದಿಲ್ಲ. ಮೈಸೂರು ವಿವಿ ವ್ಯಾಪ್ತಿಯಲ್ಲಿನ ಮರ ಕಡಿಯಲು ನಮ್ಮದೇನು ತಕರಾರು ಇಲ್ಲ ಎಂಬಂತೆ ಅಧಿಕಾರಿಗಳು ಉತ್ತರ ನೀಡಿದರು. ಬಳಿಕ ಅರಣ್ಯ ಕಾಯ್ದೆಯಲ್ಲಿನ ವಿಧಿಗಳನ್ನು ತಿಳಿಸಿದ ಬಳಿಕ ಟ್ರೀ ಅಥಾರಿಟಿ ಕಾರ್ಯವೈಖರಿ ತಿಳಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement