ಜ್ಞಾನ ವ್ಯಾಪ್ತಿ ವಿಸ್ತರಿಸಿಕೊಳ್ಳಿ
ಕ.ಪ್ರ.ವಾರ್ತೆ ಮೈಸೂರು ಮೇ 19
ವಿದ್ಯಾರ್ಥಿಗಳು ಕಾಲ ಕಾಲಕ್ಕೆ ತಮ್ಮ ಜ್ಞಾನ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಭಿಪ್ರಾಯಪಟ್ಟರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ವಿದ್ಯಾವರ್ಧಕ ಸಂಘ ಸೋಮವಾರ ವಿದ್ಯಾವರ್ಧಕ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಡಿಪ್ಲೊಮಾ ಸಿಇಟಿ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣದ ಈ ಸಂದರ್ಭದಲ್ಲಿ ಸ್ಪರ್ಧೆ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಮೌಲ್ಯಮಾಪಕರನ್ನು ಬರವಣಿಗೆ, ಸಂವಹನ ಕೌಶಲಗಳ ಮೂಲಕ ಆಕರ್ಷಿಸಬೇಕು. ನಾವು ಓದುತ್ತಿದ್ದ ದಿನಗಳಲ್ಲಿ ದ್ವಿತೀಯ ಪಿಯುಸಿ ಬಳಿಕ ವೈದ್ಯಕೀಯ, ಎಂಜಿನಿಯರಿಂಗ್ ಸೀಟು ನಿರ್ಧರಿಸುತ್ತಿದ್ದರು. ಯಾವುದೇ ತರಬೇತಿಯೂ ಸಿಗುತ್ತಿರಲಿಲ್ಲ. ಬರವಣಿಗೆ ಮತ್ತು ನಿರಂತರ ಅಧ್ಯಯನ ಮಾತ್ರ ನಮ್ಮ ಬೆನ್ನೆಲುಬಾಗಿತ್ತು. ಆದರೆ ಇಂದು ವಿದ್ಯಾರ್ಥಿಗಳು ಕಾಲ ಕಾಲಕ್ಕೆ ತಮ್ಮ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಇಂದು ತಂತ್ರಜ್ಞಾನ ಬಹಳ ಅಭಿವೃದ್ಧಿ ಹೊಂದಿದೆ. ಸ್ಮಾರ್ಟ್ ಫೋನ್‌ನಲ್ಲಿ ಎಲ್ಲವನ್ನೂ ತಿಳಿಯಬಹುದಾಗಿದೆ ಎಂದು ಹೇಳಿದರು.
ಭಾರತದಲ್ಲಿ ಯುವ ಶಕ್ತಿ ಹೆಚ್ಚಿದೆ. ಬಹುಮುಖ ಪ್ರತಿಭೆಗಳಿಗೆ ಅವಕಾಶ ಇದೆ. ಓದಿನಿಂದ ನಿಮ್ಮ ಪಾಲಿಗೆ ಆಯ್ಕೆಗಳು ಹೆಚ್ಚಾಗಿದೆ. ಸತತ ಪ್ರಯತ್ನ, ಆತ್ಮವಿಶ್ವಾಸ, ನಂಬಿಕೆ, ಧೈರ್ಯದಿಂದ ಕನಸುಗಳನ್ನು ನನಸು ಮಾಡಲು ಸಾಧ್ಯ ಎಂದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಕಾವೇರಿ ನೀರಾವರಿ ನಿಗಮ ಎಇಇ ಟಿ. ಭಾಸ್ಕರ್, ಸೇಂಟ್ ಜೋಸೆಫ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಬೆಕೆಟ್ ಡಿಸೋಜಾ ಇದ್ದರು.