ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾಪಂ ಕಚೇರಿಗೆ ಶಾಸಕರ ದಿಢೀರ್ ಭೇಟಿ

Srinivasa Murthy VN
Updated On : 21 May 2014, 12:14 pm

ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 20
ತಾಲೂಕು ಪಂಚಾಯಿತಿ ಕಚೇರಿಗೆ ಶಾಸಕ ಸಾ.ರಾ. ಮಹೇಶ್ ದಿಢೀರ್ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದರಲ್ಲದೆ, ಕಚೇರಿಯ ಸಿಬ್ಬಂದಿಯೊಬ್ಬ ಹಾಜರಾತಿಗೆ ಸಹಿ ಹಾಕದೆ ಗೈರುಹಾಜರಾಗಿದ್ದನ್ನು ಕಂಡು ವ್ಯವಸ್ಥಾಪಕಿ ನಾಗರತ್ನ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಸಂಜೆ 5ಕ್ಕೆ ಶಾಸಕರು ಕಚೇರಿಗೆ ಭೇಟಿ ನೀಡಿ, ಹಾಜರಾತಿ ಪರಿಶೀಲಿಸಿದಾಗ ತಾಲೂಕಿನ ಬೀಚನಹಳ್ಳಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಿಂದ ತಾಪಂಗೆ ನಿರ್ಮಲ ಭಾರತ ಅಭಿಯಾನ ಸಂಯೋಜಕನಾಗಿ ನಿಯೋಜಿತನಾಗಿರುವ ಕೆ.ರವಿಕುಮಾರ್ ಕಚೇರಿಯಲ್ಲಿ ಹಾಜರಿರಲಿಲ್ಲ. ಜತೆಗೆ ಹಾಜರಾತಿಗೂ ಎರಡು ದಿನಗಳಿಂದ ಸಹಿಯನ್ನು ಹಾಕಿರಲಿಲ್ಲ.ಇದರಿಂದ ಅಸಮಾಧಾನಗೊಂಡ ಸಾ.ರಾ.ಮಹೇಶ್ ಕೂಡಲೇ ಈತನನ್ನು ತಾಪಂ ನಿಯೋಜನೆಯ ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ದೂರವಾಣಿಯಲ್ಲಿ ಜಿಪಂ ಸಿಇಒ ಗೋಪಾಲ್ ಮತ್ತು ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಮೂರ್ತಿ ಅವರಿಗೆ ಸೂಚನೆ ನೀಡಿದರು.
ಜತೆಗೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಗೀತಾ ಎಂಬವವರು ಮೈಸೂರು ಜಿಪಂ ಕಚೇರಿಗೆ ನಿಯೋಜನೆ ಮೇಲೆ ತೆರಳಿದ್ದು, ಇದರಿಂದ ಇಲ್ಲಿನ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ. ಆದ್ದರಿಂದ ಆಕೆಯ ನಿಯೋಜನೆಯನ್ನು ರದ್ದು ಮಾಡಿ ತಾಪಂಗೆ ವಾಪಸ್ ಕಳುಹಿಸಬೇಕೆಂದು ಆದೇಶಿಸಿದರು.
ಕಚೇರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಇನ್ನು ಮುಂದೆ ನಾನು ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳಿಗೂ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಗೈರುಹಾಜರಿ ಸೇರಿದಂತೆ ಕರ್ತವ್ಯ ಲೋಪ ಕಂಡುಬಂದರೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರಲ್ಲದೆ ಸಾರ್ವಜನಿಕರು ಇಂತಹ ಲೋಪಗಳು ಕಂಡುಬಂದರೆ ನನಗೆ ದೂರು ಸಲ್ಲಿಸಬಹುದೆಂದು ತಿಳಿಸಿದರು. ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯಮಹದೇವಸ್ವಾಮಿ, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement