ಮೋದಿ ನಂಬುವುದು ಕಷ್ಟ
ಕ.ಪ್ರ.ವಾರ್ತೆ ಮೈಸೂರು ಮೇ 20
ಸಾಂಪ್ರದಾಯಿಕ ಚಿಂತನೆ ಇರುವ ನರೇಂದ್ರ ಮೋದಿಯಂತಹ ವ್ಯಕ್ತಿಗಳನ್ನು ನಂಬುವುದು ಕಷ್ಟ ಎಂದು ಚಿಂತಕ ಪ್ರೊ.ಕಾಳೇಗೌಡ ನಾಗವಾರ ಆಂತಕ ವ್ಯಕ್ತಪಡಿಸಿದರು.
ನಗರದ ಮಹಾರಾಣಿ ಎನ್ಟಿಎಂ ಶಾಲಾ ಆವರಣದಲ್ಲಿ ಮಂಗಳವಾರ ಜ್ಞಾನಬುತ್ತಿ ಸಂಸ್ಥೆಯಿಂದ ಆಯೋಜಿಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಪೊಲೀಸ್ ಪೇದೆ ಪರೀಕ್ಷೆಯ ಉಚಿತ ತರಬೇತಿ, ಶಿಬಿರಾರ್ಥಿಗಳಿಗೆ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಅಧ್ಯಯನ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಯಾರ ಮೇಲೂ ದ್ವೇಷ ಇಟ್ಟುಕೊಳ್ಳದೆ, ನಕಾರಾತ್ಮಕ ಆಲೋಚನೆ ಬಿಟ್ಟು ಸಕಾರಾತ್ಮಕ ಆಡಳಿತ ನೀಡುವುದಾಗಿ ಹೇಳಿದ್ದಾರೆ. ನುಡಿದಂತೆ ನಡೆದರೆ ಸಂತೋಷ ಎಂದರು.
ದೇಶದಲ್ಲಿ ಅಸಮಾನತೆ ಎಂಬುದು ಹೆಚ್ಚಾಗಿದೆ. ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಒಬ್ಬ ಪೇದೆ ಹಾಗೂ ಐಜಿಪಿ ಪಡೆಯುವ ಸಂಬಳದಲ್ಲಿ ಅಸಮಾನತೆ ಇದೆ ಎಂದು ಅವರು ವಿಷಾದಿಸಿದರು.
ಪ್ರಾಧ್ಯಾಪಕ ಎಂ. ಕೃಷ್ಣೇಗೌಡ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ವೈ.ಎನ್. ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಶಿಕ್ಷಣ ತರಬೇತಿ ವಿಭಾಗದ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನ ಶಾಸ್ತ್ರಿ, ಪೊಲೀಸ್ ತರಬೇತಿ ವಿಭಾಗದ ಅಧ್ಯಕ್ಷ ಜೆ.ಬಿ. ರಂಗಸ್ವಾಮಿ, ಕೆ.ಎಂ. ವೀರಯ್ಯ, ಡಾ.ಎಂ.ಎಂ. ಪ್ರಹ್ಲಾದ್ ಇದ್ದರು.