ರೇಲ್ವೆ ಟಿಕೆಟ್ ತಪಾಸಣೆ ಅಧಿಕಾರಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮೇ 20
ರೇಲ್ವೆ ಟಿಕೆಟ್ ತಪಾಸಣೆ ಅಧಿಕಾರಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಟಿಕೆಟ್ ತಪಾಸಣೆ ಅಧಿಕಾರಿಗಳು ಪ್ರತಿಭಟಿಸಿದರು.
ನೈಋತ್ಯ ರೇಲ್ವೆ ಮಜ್ದೂರ್ ಸಂಘದ ಅಡಿ ಪ್ರತಿಭಟಿಸಿದ ಅವರು, ರೇಲ್ವೆ ಟಿಕೆಟ್ ತಪಾಸಣೆ ಅಧಿಕಾರಿಗಳಿಗೆ ರೈಲಿನಲ್ಲಿ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಉತ್ತಮ ಹಾಸಿಗೆ ವ್ಯವಸ್ಥೆ, ಶೌಚಾಲಯ, ಬಿಸಿನೀರಿನ ವ್ಯವಸ್ಥೆ, ಕಪಾಟಿನ ವ್ಯವಸ್ಥೆ ಮಾಡಬೇಕು. ಈ ಸಂಬಂಧ ರೇಲ್ವೆ ಮಂಡಳಿಯ ಶಿಫಾರಸು ಸಹ ಮಾಡಿದೆ. ಆದರೂ ಈ ಸೌಲಭ್ಯಗಳು ತಮಗೆ ದೊರಕುತ್ತಿಲ್ಲ ಎಂದು ದೂರಿದರು.
ಅಲ್ಲದೆ ಹಿರಿಯ ಅಧಿಕಾರಿಗಳು ಟಿಕೆಟ್ ರಹಿತ ಪ್ರಯಾಣದ ದಂಡದ ಪ್ರಮಾಣವನ್ನು ಇಂತಿಷ್ಟೆ ಸಂಗ್ರಹಿಸಬೇಕು ಎಂದು ನಿಗದಿಪಡಿಸಿರುವುದು ಸರಿಯಲ್ಲ. ಅಲ್ಲದೆ ಟಿಕೆಟ್ ತಪಾಸಣೆ ಅಧಿಕಾರಿಗಳ ಖಾಲಿ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಾ ಪುರಸ್ಕಾರ
ಮೈಸೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಿ ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಕ್ರಮವಾಗಿ 1,500 ಹಾಗೂ 2,000 ಪ್ರೋತ್ಸಾಹಧನ ನೀಡಲಾಗುವುದು ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ವಿ. ನಾಯ್ಡು ಹೇಳಿದ್ದಾರೆ.
ಜಿಲ್ಲಾ, ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಬ್ಯಾಂಕಿನ ಸದಸ್ಯರ ಮೂವರು ಮಕ್ಕಳಿಗೆ ತಲಾ ಎರಡು ಸಾವಿರದಂತೆ ಕ್ರೀಡಾ ಪ್ರೋತ್ಸಾಹಧನ ನೀಡಲಾಗುವುದು. ಸಂಬಂಧಪಟ್ಟವರು ಅಂಕಪಟ್ಟಿಯ ಪ್ರತಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಮೇ 31ರೊಳಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಸುವುದು.