ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವರುಣನ ಆರ್ಭಟಕ್ಕೆ ಜನ ತತ್ತರ

Srinivasa Murthy VN
Updated On : 21 May 2014, 12:13 pm

ಕ.ಪ್ರ.ವಾರ್ತೆ ಮೈಸೂರು ಮೇ 20
ನಗರದಲ್ಲಿ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹಲವು ಮರಗಳು ಧರೆಗುರುಳಿದ ಪರಿಣಾಮ ಅನೇಕ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿದೆ.
ಬೆಳಗಿನಿಂದ ಸುಡು ಬಿಸಿಲ ಬೇಗೆಯಿಂದ ತತ್ತರಿಸಿದ್ದ ಮೈಸೂರಿನ ಜನತೆಗೆ ಸಂಜೆ ಸುರಿದ ಮಳೆ ತಂಪೆರೆಯಿತಾದರೂ, ಬಿರುಗಾಳಿಗೆ ನಗರದ ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ, ವಿಜಯನಗರ, ಕೃಷ್ಣಮೂರ್ತಿಪುರಂ, ಚಾಮರಾಜ ಮೊಹಲ್ಲಾ ಭಾಗದ ಅನೇಕ ಬಡಾವಣೆಗಳಲ್ಲಿ ಮರಗಳು ಧರೆಗುರುಳಿದವು.
ಮರಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಯಿತು. ಮರಗಳ ಜೊತೆ ಅನೇಕ ವಿದ್ಯುತ್ ಕಂಬಗಳು ಧರೆಗುರುಳಿದವು. ಮರವೊಂದು ನಗರದ ಸರಸ್ವತಿಪುರಂ ಜೆಎಸ್‌ಎಸ್ ಕಾಲೇಜಿನ ಕಾಂಪೌಂಡ್ ಮೇಲೆ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಅಲ್ಲದೆ ರಸ್ತೆ ಬದಿ ನಿಲ್ಲಿಸಿದ್ದ ಅನೇಕ ಕಾರುಗಳು ಜಖಂಗೊಂಡಿವೆ.
ಈ ಮಧ್ಯೆ ಕೃಷ್ಣಮೂರ್ತಿಪುರಂನಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಕೃಷ್ಣಮೂತಿರ್ಪಪುರಂ ರಾಮಮಂದಿರಕ್ಕೂ ಮಂಡಿ ಮಟ್ಟಕ್ಕೆ ನೀರು ನುಗ್ಗಿದೆ. ಅಲ್ಲದೆ ರಾಮಮಂದಿರ ಹಿಂಭಾಗದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮ್ಯಾನಹೊಲ್‌ಗಳು ತೆರೆದುಕೊಂಡ ಪರಿಣಾಮ ಕಲುಷಿತ ನೀರು ಮನೆಗೆ ನುಗ್ಗಿತು. ಅಲ್ಲದೆ ಅನೇಕ ಮರಗಳು ರಸ್ತೆಗೆ ಉರುಳಿಬಿದ್ದು ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ.
ಗುಡುಗು ಸಿಡಿಲು ಸಮೇತ ಬಿದ್ದ ಮಳೆ ಒಂದೆಡೆ ಇಳೆಯನ್ನು ತಂಪು ಮಾಡಿದರೂ, ತಗ್ಗು ಪ್ರದೇಶದಲ್ಲಿ ಸಾರ್ವಜನಿಕರು ಪರದಾಡುವಂತೆ ಆಯಿತು.

ಸಿಡಿಲು ಬಡಿದು 7 ಮಂದಿಗೆ ಗಾಯ
ಹುಣಸೂರು: ತಾಲೂಕಿನ ಅರಸು ಕಲ್ಲಹಳ್ಳಿಯಲ್ಲಿ ಸಿಡಿಲಿನಿಂದ ಒಂದೇ ಕುಟುಂಬದ ಏಳು ಮಂದಿ ತೀವ್ರವಾಗಿ ಗಾಯಗೊಂಡು ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಮಂಗಳವಾರ ಸಂಜೆ ಜರುಗಿದೆ. ತಮ್ಮಣ್ಣ, ಮದನ್‌ಕುಮಾರ್, ಮಂಜು, ಮನೋಜ್, ಜಮುನಾ, ಸರಸ್ಪತಿ, ಅಕ್ಷಿತಾ ಗಾಯಗೊಂಡವರು. ಮಂಗಳವಾರ ಸಂಜೆ ಬಿದ್ದ ಭಾರಿ ಮಳೆ ಮತ್ತು ಸಿಡಿಲಿಗೆ ಗ್ರಾಮದ ತಮ್ಮಣ್ಣ, ಮದನ್, ಮನೋಜ್ ಎಂಬವರು ಪ್ರಜ್ಞಾಹೀನಾರಾಗಿ ಕೆಳಗೆ ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಪ್ರಜ್ಞೆ ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement