ಕಾಡುತ್ತಿದೆ ಮೂಲ ಸೌಕರ್ಯಗಳ ಕೊರತೆ
ಟಿ. ನರಸೀಪುರ: ಹದಗೆಟ್ಟು ಹೋಗಿರುವ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಯಾವೊಂದು ಮೂಲಭೂತ ಸೌಕರ್ಯ ಸಮರ್ಪಕವಾಗಿಲ್ಲದಿರುವ ಬಗ್ಗೆ ಅಲ್ಲಿನ ನಿವಾಸಿಗಳು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಿಗೆ ದೂರು ನೀಡಿದರು.
ಪಟ್ಟಣದ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಿದ್ದ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಅವರಿಗೆ ಹೌಸಿಂಗ್ ಬೋರ್ಡ್ ಬಡಾವಣೆ ನಿವಾಸಿಗಳು ಮಳೆ ಬಂದಂತೆ ಓಡಾಡಲಾಗದಷ್ಟು ಕೆಸರುಮಯವಾಗುವ ರಸ್ತೆಗಳು, ರಾತ್ರಿ ವೇಳೆ ವಿದ್ಯುತ್ ಬೀದಿ ದೀಪಗಳಿಲ್ಲದಿರುವುದು ಹಾಗೂ ಐದಾರು ವರ್ಷಗಳಿಂದ ಒಳಚರಂಡಿ ಕಟ್ಟಿಕೊಂಡಿದೆ. ನಿಷ್ಕ್ರಿಯಗೊಂಡು ಪಡುತ್ತಿರುವ ಬವಣೆ ಹೇಳಿಕೊಂಡರು.
ನಾಗರಿಕ ಸೇವಾ ವೇದಿಕೆ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, ಸಿಎಂ ಕ್ಷೇತ್ರವಾದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನಿವಾಸಿಗಳಿಗೆ ನಾಗರಿಕ ಸೌಲಭ್ಯಗಳು ಮರೀಚಿಕೆಯಾಗಿವೆ. ನೂರು ಹಾಸಿಗೆಯುಳ್ಳ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇದೆ. ಸರ್ಕಾರಿ ವೈದ್ಯಕೀಯ ಚಿಕಿತ್ಸೆ ಬಡವರಿಗೆ ಸರಿಯಾಗಿ ಸಿಗುತ್ತಿಲ್ಲ. ಪಪಂ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಮೀಸಲಾತಿ ಅನ್ವಯ ಮಳಿಗೆಗಳನ್ನು ಪ.ಜಾತಿ ಮತ್ತು ಪಂಗಡಗಳಿಗೆ ನೀಡಿಲ್ಲವೆಂದು ದೂರಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ್‌ರಿಂದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಿಎಂ ಜಂಟಿ ಕಾರ್ಯದರ್ಶಿ ರಾಮಯ್ಯ, ಹೌಸಿಂಗ್ ಬೋರ್ಡ್‌ನ ಸಮಸ್ಯೆಗಳನ್ನು ಸರಿಪಡಿಸಬೇಕು. ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯನ್ನು ಪುನಾರಂಭಿಸಬೇಕು. ಪಪಂ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟರಿಗೆ ಮೀಸಲಾತಿ ಅನ್ವಯ ಹಂಚಿಕೆ ಮಾಡಿ ಎಂದು ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್‌ಗೆ ಸೂಚಿಸಿದರು. ತಾಪಂ ಅಧ್ಯಕ್ಷ ನಟರಾಜು, ಎಪಿಎಂಸಿ ಅಧ್ಯಕ್ಷ ಎಂ.ರಾಜು, ಕಬಿನಿ ನೀರಾವರಿ ನಿಗಮದ ಇಇ ಎಂ. ಮರಿಸ್ವಾಮಿ, ತಹಸೀಲ್ದಾರ್ ರಾಮಪ್ಪ, ಪುಟ್ಟಸ್ವಾಮಿ, ತಾಪಂ ಸದಸ್ಯ ಅಂದಾನಿ,ರೂಪಶ್ರೀ, ಶಿವಮ್ಮ ಮಹದೇವ ಇದ್ದರು.