ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರಂತ, ಲೋಹಿಯಾ ಅಧ್ಯಯನ ಪೀಠ

Srinivasa Murthy VN
Updated On : 28 May 2014, 10:47 am

ಕ.ಪ್ರ.ವಾರ್ತೆ ಮೈಸೂರು ಮೇ 28
ದೇಶದಲ್ಲಿಯೇ ಮೊದಲ ಬಾರಿಗೆ ರಂಗ ನಿರ್ದೇಶಕ ಬಿ.ವಿ. ಕಾರಂತರ ಅಧ್ಯಯನ ಪೀಠ ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಭಾರತೀಯ ರಂಗಭೂಮಿಯಲ್ಲಿ ಪ್ರತಿಭಾವಂತ ನಿರ್ದೇಶಕ ಬಿ.ವಿ. ಕಾರಂತ. ಆದರೆ ಅತ್ಯಂತ ಶ್ರೇಷ್ಠ ಸಾಹಿತಿಗಳು ಸೇರಿದಂತೆ ಬಹಳ ಜನರು ಕುಲಪತಿಗಳಾಗಿ ಹೋಗಿದ್ದರೂ ಯಾವುದೇ ವಿವಿಯು ಅವರನ್ನು ಗೌರವಿಸಿಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಸಾಹಿತ್ಯ ವಿದ್ಯಾರ್ಥಿ ಅಲ್ಲದಿದ್ದರೂ ನನಗೆ ಸಾಹಿತ್ಯ ಹಾಗೂ ನಾಟಕದ ಬಗ್ಗೆ ಅಪಾರ ಆಸಕ್ತಿ ಹಾಗೂ ಒಲವಿದೆ. ಕಾರಂತರ ಸತ್ತವರ ನೆರಳು ನಾಟಕ ನೋಡಿ ಆಕರ್ಷಿತನಾದೆ. ಅವರ ಹಾಡು, ನಟನೆ, ನಿರ್ದೇಶನ ಕಂಡು ಅಭಿಮಾನ ಪಟ್ಟಿದ್ದೇನೆ. ವೈಯಕ್ತಿಕ ಹಾಗೂ ವಿವಿಯ ಕಾಳಜಿಯಿಂದ ಈ ಪೀಠ ಆರಂಭಿಸಲೂ ಸಾಧ್ಯವಾಗಿದೆ ಎಂದರು.
ಶೈಕ್ಷಣಿಕ ವಲಯದಲ್ಲಿ ಲೋಹಿಯಾ ಅವರನ್ನು ಅಸ್ಪೃಶ್ಯರಂತೆ ದೂರ ಇಡಲಾಗಿದ್ದು, ದೇಶಕ್ಕೆ ಅವರ ಕೊಟ್ಟ ಕೊಡುಗೆ ಅನನ್ಯವಾದುದು. ಆದ್ದರಿಂದ ಬಿ.ವಿ. ಕಾರಂತ ಹಾಗೂ ಲೋಹಿಯಾ ಅವರ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದರು. ಪೀಠದ ಗೌರವ ನಿರ್ದೇಶಕ ಸಿ. ಬಸವಲಿಂಗಯ್ಯ ಇದ್ದರು.31 ರಂದು ಉದ್ಘಾಟನೆ: ಪದ್ಮಶ್ರೀ ಬಿ.ವಿ. ಕಾರಂತ ಅಧ್ಯಯನ ಪೀಠದ ಉದ್ಘಾಟನೆಯು ಮೇ 31 ರಂದು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಪ್ರೊ.ವಾಮನ ಬೇಂದ್ರೆ ಉದ್ಘಾಟಿಸುವರು. ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ನಾಟಕಕಾರ ಡಾ.ಕೆ.ವೈ. ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸುವರು.
ಅದೇ ದಿನ ಮಧ್ಯಾಹ್ನ 12ಕ್ಕೆ ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಿ.ವಿ.ಕಾರಂತ ಮತ್ತು ರಂಗಭೂಮಿ ಎಂಬ ವಿಚಾರ ಸಂಕಿರಣದಲ್ಲಿ ಕಾರಂತರು ಮತ್ತು ಕನ್ನಡ ರಂಗಭೂಮಿ ಎಂಬ ವಿಷಯ ಕುರಿತು ರಂಗಕರ್ಮಿ ಜೆ.ಶ್ರೀನಿವಾಸಮೂರ್ತಿ, ಕಾರಂತರು ಮತ್ತು ಸಾಂಸ್ಕೃತಿಕ ಚಿಂತನೆ ಎಂಬ ವಿಷಯ ಕುರಿತು ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್, ಕಾರಂತರು ಮತ್ತು ರಂಗ ಸಂಗೀತ ಎಂಬ ವಿಷಯ ಕುರಿತು ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡುವರು. ಮಧ್ಯಾಹ್ನ 2 ಕ್ಕೆ ಟಿ.ಎಸ್. ನಾಗಾಭರಣ ನಿರ್ದೇಶನದ ಬಿ.ವಿ. ಕಾರಂತರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಿದೆ.

ಮುಕ್ತ ವಿವಿಯ ಮಾನ್ಯತೆ ಪಡೆದಿರುವ ಅಧ್ಯಯನ ಕೇಂದ್ರಗಳಲ್ಲಿ ಪರೀಕ್ಷೆಯ ಅಕ್ರಮಗಳು ನಡೆದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇದರ ತಡೆಗೆ ಅಗತ್ಯ ಕ್ರಮ ವಹಿಸಲಾಗಿದೆ. ಆಯಾಯ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರಿಗೆ ಈಗಾಗಲೇ ಸೂಚಿಸಲಾಗಿದೆ. ಅಕ್ರಮ ಎಸಗಿದ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸಲಾಗುವುದು. ಅನಧಿಕೃತ ಸಂಸ್ಥೆಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು. ಸಾಂಪ್ರದಾಯಿಕ ವಿವಿಗಳು ದೂರ ಶಿಕ್ಷಣ ಆರಂಭಿಸುವುದರ ವಿರುದ್ಧ ಕಾನೂನು ಹೋರಾಟಕ್ಕೆ ಆಡಳಿತ ಮಂಡಳಿಯ ಸಲಹೆ ಪಡೆಯಲಾಗುವುದು.
 ಪ್ರೊ.ಎಂ.ಜಿ. ಕೃಷ್ಣನ್, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿವಿ

ಅಧ್ಯಯನ ಪೀಠ ಸಂಸ್ಕೃತಿ ಕೇಂದ್ರವಾಗಲಿದೆ
ಮೈಸೂರು: ಡಾ. ಬಿ.ವಿ. ಕಾರಂತ ಅಧ್ಯಯನ ಪೀಠವು ರಾಷ್ಟ್ರಮಟ್ಟದ ಸಂಸ್ಕೃತಿ ಕೇಂದ್ರ ಆಗಲಿದೆ ಎಂದು ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.
ಸಂಶೋಧನೆ, ಅಧ್ಯಯನ ಹಾಗೂ ವಿಚಾರ ಸಂಕಿರಣಕ್ಕೆ ಈ ಪೀಠ ಸೀಮಿತವಲ್ಲ. ಒಟ್ಟಾರೆ ಕನ್ನಡ ರಂಗಭೂಮಿಯ ಆಶಯಗಳಿಗೆ ತಕ್ಕಂತೆ ಒಂದು ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಯುವಕ ಯುವತಿಯರಿಗೆ ರಂಗಭೂಮಿಯ ಆಸಕ್ತಿ ಮೂಡಿಸಲು 3 ತಿಂಗಳ ಅಲ್ಪಾವಧಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿರಂತರವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲೆ, ಸಂಸ್ಕೃತಿ ಮತ್ತು ರಂಗಭೂಮಿ ಕುರಿತ ಚಿಂತನ ಕಮ್ಮಟಗಳು, ರಂಗಭೂಮಿ, ಹಿರಿತೆರೆ, ಕಿರುತೆರೆ ಅಭಿನಯದ ಶೈಲಿಗಳ ಕಾರ್ಯಾಗಾರಗಳು, ಸಂಶೋಧನಾ ಕ್ಷೇತ್ರಕ್ಕೆ ಪೂರಕವಾದ ರಂಗಭೂಮಿ, ಕಲೆ ಸಂಸ್ಕೃತಿಯ ಗ್ರಂಥಾಲಯ ಸ್ಥಾಪಿಸುವುದು. ಕಾರಂತರ ವಸ್ತು ಸಂಗ್ರಹದ ಗ್ಯಾಲರಿ ಹಾಗೂ ರಂಗಕಲೆ ಪರಿಕರಗಳ ಕಲಾ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದರು.
ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಒತ್ತಾಸೆಯಾಗಿ ನಿಲ್ಲುವುದು ಹಾಗೂ ಅವರಿಗೆ ತಾಲೀಮು ಮಂದಿರ ನಿರ್ಮಿಸುವುದು. ಸುಮಾರು 2 ಸಾವಿರ ಮಂದಿ ಕೂರಬಹುದಾದ ರಂಗಮಂದಿರ ಸ್ಥಾಪನೆ. ನಾಟಕೋತ್ಸವ, ಸಂಸ್ಕೃತಿ ಶಿಬಿರ, ಚಲನಚಿತ್ರ ರಸಗ್ರಹಣ ಶಿಬಿರ ಮುಂತಾದ ಕಾರ್ಯಾಗಾರಗಳನ್ನು ಸಂಘಟಿಸುವ ಉದ್ದೇಶವಿದೆ ಎಂದು ವಿವರಿಸಿದರು.
ಶನಿವಾರ ಮತ್ತು ಭಾನುವಾರ ಸಂಜೆ ತರಗತಿ ಆರಂಭಿಸಿದರೆ ವಿದ್ಯಾರ್ಥಿಗಳಲ್ಲದೆ ಇತರೆ ಉದೋಗಸ್ಥರು ಬರಲು ಅನುಕೂಲವಾಗಲಿದೆ ಎಂದ ಅವರು, ಹೆಚ್ಚು ಕಾರ್ಯಕ್ರಮ ನಡೆಸಲು ಆರ್ಥಿಕ ಕೊರತೆ ಇರುವುದರಿಂದ ಪ್ರಾಯೋಜಕತ್ವ ಭರಿಸಬೇಕಿದೆ. ವಿದ್ಯಾರ್ಥಿ ವೇತನ ಮತ್ತಿತರ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನ ಕೋರಲಾಗುವುದು ಎಂದರು.

ರಂಗಭೂಮಿ ಡಿಪ್ಲೋಮಾ ಕೋರ್ಸ್‌ಗೆ ಸೇರುವ ಅಭ್ಯರ್ಥಿಗಳಿಗೆ  ವಿದ್ಯಾರ್ಹತೆ ಮಾನದಂಡವಾಗಬಾರದು. ಡಾ. ರಾಜ್‌ಕುಮಾರ್ ಹಾಗೂ ಬಿ.ಜಯಶ್ರೀ ಅವರು ವಿದ್ಯೆ ಇಲ್ಲದಿದ್ದರೂ ಮಾಡಿದ ಸಾಧನೆ ಅಪಾರ.  ಅವರಿಗೆ ವಿವಿಗಳು ಡಾಕ್ಟರೇಟ್ ನೀಡಿವೆ. ಅಭಿನಯ ಕಲೆಗೆ ಓದು ಬರಹ ಇದ್ದರು ಒಳಿತು. ಒಂದು ವೇಳೆ ಅನಕ್ಷರಸ್ಥ ಕಲಾವಿದರಿಗೆ ಲಿಖಿತ ಪರೀಕ್ಷೆಗಿಂತ ಅಭಿನಯವೇ ಉತ್ತೀರ್ಣತೆಗೆ ಮಾನದಂಡವಾಗಬೇಕು.
 ಸಿ. ಬಸಲಿಂಗಯ್ಯ, ಗೌರವ ನಿರ್ದೇಶಕ, ಬಿ.ವಿ.ಕಾರಂತ ಅಧ್ಯಯನ ಪೀಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement