ಗಾಯಾಳನ್ನು ಭೇಟಿಯಾದ ಸಂಸದ ಧ್ರುವನಾರಾಯಣ್
ಎಚ್.ಡಿ. ಕೋಟೆ: ತಾಲೂಕು ಶಿರಮಳ್ಳಿ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಗಾಯಗೊಂಡು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ಕು ಮಂದಿಯನ್ನು ಸಂಸದ ಧ್ರುವನಾರಾಯಣ್ ಗುರುವಾರ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇವು ವಿಚಾರಿಸಿದರು.
ಈ ಘಟನೆಯಲ್ಲಿ ಮೃತಪಟ್ಟ ಸಹೋದರರಾದ ಸೋಮಾಚಾರಿ ಹಾಗೂ ರಾಜಣ್ಣಾಚಾರಿ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ 1.50 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚಕ್ಕಾಗಿ 10 ಸಾವಿರ ನೀಡಲಾಗುವುದೆಂದು ತಿಳಿಸಿದರು.
ಸಂಸದರು ವೈಯಕ್ತಿಕವಾಗಿ ತಲಾ 10 ಸಾವಿರ ಹಾಗೂ ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್ ತಲಾ 5 ಸಾವಿರ ನೀಡಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಭಾಕರ್ ಜೊತೆ ಗಾಯಾಳುಗಳ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಜೊತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯು ಈ ಹಿಂದೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ ಕಾಲದಲ್ಲಿ ಉತ್ತಮವಾಗಿತ್ತು. ತದ ನಂತರದಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲವೇ ಇಲ್ಲ. ವೈದ್ಯರ ಕೊರತೆ, ಎಕ್ಸ್ರೆ, ರಾತ್ರಿ ವೇಳೆಯಲ್ಲಿ ಚಿಕಿತ್ಸೆಗಾಗಿ ಬಂದರೆ ರೋಗಿಗಳನ್ನು ಸಮರ್ಪಕವಾಗಿ ಪರೀಕ್ಷೆ ಮಾಡದೆ ಮೈಸೂರಿಗೆ ಕಳುಹಿಸಲಾಗುತ್ತಿದೆ. ಇದರಿಂದ ಬಡವರಿಗೆ ಅನಾನುಕೂಲವಾಗುತ್ತಿದೆ. ಸಮರ್ಪಕವಾದ ನಿರ್ವಹಣೆಯೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ದೂರಿದರು.
ಜಿಪಂ ಸದಸ್ಯ ಎಚ್.ಸಿ. ಮಂಜುನಾಥ್, ತಹಸೀಲ್ದಾರ್ ಶಿವಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಸ್ವಾಮಿ, ಪಿಎಸ್ಐಗಳಾದ ಶಿವಮಾದಯ್ಯ, ಚೇತನ್, ಪಟ್ಟಣದ ಬ್ಲಾಕ್ ಅಧ್ಯಕ್ಷ ತಮ್ಮಣ್ಣೇಗೌಡ, ನಾಗೇಶ್, ಪರಶಿವಮೂರ್ತಿ, ಕೃಷ್ಣೇಗೌಡ, ನಾಗೇಶ್, ಮಾಜಿ ಜಿಪಂ ಸದಸ್ಯ ಚಿಕ್ಕವೀರನಾಯಕ, ರಾಜು, ಕೊಡಸೀಗೆ ರಾಜೇಗೌಡ, ಕಸಬಾ ಆರ್.ಐ. ರವಿಚಂದ್ರ ಇದ್ದರು.