ಜಿಗಜಿಣಗಿಗೆ ಸಚಿವ ಸ್ಥಾನ ನೀಡದೆ ಬಿಜೆಪಿ ಅನ್ಯಾಯ
ಮೈಸೂರು: ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯವೆಸಗಿದ್ದಾರೆ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಅಧ್ಯಕ್ಷ ವಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ಎಂ.ಮಹದೇವಪ್ಪ ಖಂಡಿಸಿದ್ದಾರೆ. ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಜಿಗಜಿಣಗಿ ಅವರು ದಲಿತ ಸಮುದಾಯದ ಮಾದಿಗ ಜನಾಂಗದಲ್ಲಿ ಹಿರಿಯ ಜನನಾಯಕರಾಗಿ 7 ಬಾರಿ ಸಂಸದರಾಗಿದ್ದಾರೆ. ಎಲ್ಲ ಜನಾಂಗಕ್ಕೂ ಕ್ಷೇತ್ರದಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿ, ಜನರ ಮೆಚ್ಚುಗೆಗೆ ಪಾತ್ರಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ದಲಿತರನ್ನು ಮರಳು ಮಾಡಿ ದಲಿತ ಮತ ಸೆಳೆದ ಬಿಜೆಪಿ 17 ಸ್ಥಾನಗಳನ್ನು ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇಲ್ವರ್ಗದವರಿಗೆ ಸೂಕ್ತ ಸಚಿವ ಸ್ಥಾನಮಾನಗಳನ್ನು ನೀಡಿ, ಜಿಗಜಿಣಗಿ ಅವರಿಗೆ ಸ್ಥಾನಮಾನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಜಿಗಜಿಣಗಿ ಅವರಿಗೆ ಕೇಂದ್ರದಲ್ಲಿ ಸಚಿವ ನೀಡಿ, ನ್ಯಾಯ ದೊರಕಿಸಿಕೊಡುವಂತೆ ವೇದಿಕೆಯ ಉಪಾಧ್ಯಕ್ಷ ಕೃಷ್ಣ, ಎಂ.ರಾಜು, ಎಂ.ಮಹದೇವು, ಎಂ.ಸ್ವಾಮಿ, ಸಿ.ಶ್ರೀನಿವಾಸ್, ಚಂದ್ರಶೇಖರ್, ನಾಗೇಶ, ಭೋಜರಾಜು ಒತ್ತಾಯಿಸಿದ್ದಾರೆ.
ತಾಯಿ ಮಗಳು ನಾಪತ್ತೆ
ಮೈಸೂರು: ಕೆ.ಆರ್. ಠಾಣೆ ವ್ಯಾಪ್ತಿಯ ನಿವಾಸಿ ಮೋಹನ್ ಅ. ಲೋಕೇಶ್ ಎಂಬವರ ಪತ್ನಿ ಎಂ.ಕಾತ್ಯಾಯಿನಿ (30) ಹಾಗೂ ಮಗಳು ವಸುಂದರಾ (5) ಮಂಗಳವಾರ ನಾಪತ್ತೆಯಾಗಿದ್ದಾರೆ. ಪತ್ನಿ ಮತ್ತು ಮಗಳು ಮನೆಯಲ್ಲಿದ್ದ ಬೆಳ್ಳಿ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಣೆಯಾಗಿರುವ ಇಬ್ಬರನ್ನು ಪತ್ತೆ ಮಾಡಿ ಕೊಡುವಂತೆ ಮೋಹನ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಾತ್ಯಾಯಿನಿ ಚಹರೆ- 5.4 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ದೃಢಕಾಯ ಶರೀರ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ವಸುಂದರಾ ಚಹರೆ- 3 ಅಡಿ ಎತ್ತರ, ಗೋದಿ ಮೈಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂಪರ್ಕಿಸಿ.
ರಕ್ಷಿತ್ಗೆ ರ್ಯಾಂಕ್
ಮೈಸೂರು: ಈ ಬಾರಿಯ ಸಿಇಟಿ ಪರೀಕ್ಷೆಯ ಎಂಜಿನಿಯರ್ ವಿಭಾಗದಲ್ಲಿ ನಗರದ ಮದರ್ ತೇರೆಸ ಕಾಲೇಜಿನ ವಿದ್ಯಾರ್ಥಿ ರಕ್ಷಿತ್ ಆರ್. ಗೋರೆ 80ನೇ ರ್ಯಾಂಕ್, ವೈದ್ಯಕೀಯದಲ್ಲಿ 493ನೇ ರ್ಯಾಂಕ್ ಗಳಿಸಿದ್ದಾರೆ.ಇವರು ರವೀಂದ್ರ ಗೋರೆ, ಡಾ.ಸಂಗೀತ ಆರ್. ಗೋರೆ ಅವರ ಪುತ್ರ.
ಅಪರಿಚಿತ ಸಾವು
ಮೈಸೂರು: ಚಾಮುಂಡಿಬೆಟ್ಟದ ಪಾದದ ಬಳಿ ಪೇಪರ್ ಆಯುತ್ತಿದ್ದ ಅಪರಿಚಿತ ವ್ಯಕ್ತಿ ಬುಧವಾರ ಮೃತಪಟ್ಟಿದ್ದಾರೆ. ಚಹರೆ- 40 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ತೆಳ್ಳನೆ ಶರೀರ, ಗಡ್ಡ ಮೀಸೆ ಬಿಟ್ಟಿದ್ದಾರೆ. ಕಪ್ಪು ಬಣ್ಣದ ಕೆಂಪು ಗೆರೆಯುಳ್ಳ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418319 ಸಂಪರ್ಕಿಸಲು ಕೆ.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಬಿಗ್ ಬಜಾರ್ನಲ್ಲಿ ಅನ್ನಸಂತರ್ಪಣೆ ಇಂದು
ಮೈಸೂರು: ನಗರದ ಚಾಮರಾಜಪುರಂನಲ್ಲಿರುವ ಬಿಗ್ ಬಜಾರ್ ಸೂಪರ್ ಸೆಂಟರ್ನಲ್ಲಿ ಮೇ 30ರ ಮಧ್ಯಾಹ್ನ 12.30ಕ್ಕೆ ಭಾರತೀಯ ಅನಾಥ ಹಾಗೂ ಬಡಜನರ ಫೌಂಡೇಷನ್ ಅಭಿವೃದ್ಧಿಗಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಅಂದು ಬಿಗ್ ಬಜಾರ್ಗೆ ಬರುವ ಗ್ರಾಹಕರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು. ಊಟದ ನಂತರ ಗ್ರಾಹಕರು ಅಲ್ಲಿರುವ ಹುಂಡಿಯಲ್ಲಿ ತಮ್ಮ ಇಚ್ಛಾನುಸಾರ ಹಣ ಹಾಕಬಹುದು. ಹೀಗೆ ಸಂಗ್ರಹಿಸುವ ಹಣವನ್ನು ಭಾರತೀಯ ಅನಾಥ ಮತ್ತು ಬಡಜನರ ಫೌಂಡೇಷನ್ಗೆ ನೀಡಲಾಗುವುದು ಎಂದು ಬಿಗ್ ಬಜಾರ್ ಫ್ಯಾಷನ್ ವಿಭಾಗದ ವ್ಯವಸ್ಥಾಪಕ ರವಿಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಅನಾಥ ಹಾಗೂ ಬಡಜನರ ಫೌಂಡೇಷನ್ ಸ್ಥಾಪಕ ಎನ್.ಅರುಣ್ ಮಾತನಾಡಿ, ಅನಾಥರು ಮತ್ತು ಬಡವರ ಆರೋಗ್ಯ, ಶಿಕ್ಷಣ, ಆಹಾರ, ವಸತಿ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ 6 ಮಕ್ಕಳಿಗೆ ಸಂಸ್ಥೆ ವತಿಯಿಂದ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಆಕಾಶ್ಗೆ ಉನ್ನತ ಶ್ರೇಣಿ
ಮೈಸೂರು: ಮಾರ್ಚ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಯಲಕ್ಷ್ಮೀಪುರಂನ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಎಚ್.ಕೆ. ಆಕಾಶ್ 609 (ಶೇ. 97.44) ಅಂಕ ಗಳಿಸಿದ್ದಾರೆ. ಈತ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ಕೃಷ್ಣಪ್ಪ ಅವರ ಪುತ್ರ.
ಭವನ ಪಾಳು ಬಂಗಲೆ ಆಗದಿರಲಿ
ಹುಣಸೂರು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಕೇಂದ್ರಬಿಂದುವಾದಲ್ಲಿ ಮಾತ್ರ ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸುವ ಭವನಗಳು ಸಾರ್ಥಕತೆ ಪಡೆಯಲು ಸಾಧ್ಯ. ಹೀಗಾಗಿ ಭವನಗಳು ಪಾಳು ಬಂಗಲೆಗಳಾಗುವುದನ್ನು ತಡೆಯಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಸಲಹೆ ನೀಡಿದರು. ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ 35 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿರುವ ಬಾಬು ಜಗಜೀವನರಾಂ ಭವನದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂತಹ ಭವನಗಳು ಇಡೀ ಗ್ರಾಮದ ಅಭಿವೃದ್ಧಿಯನ್ನು ಸೂಚಿಸುವ ಕೇಂದ್ರವಾಗಬೇಕು. ಕೃಷಿ, ಸಾಂಸ್ಕೃತಿಕ, ಆರೋಗ್ಯ, ಯುವಜನರ ಏಳಿಗೆಯಂತಹ ವಿಷಯಗಳ ಕುರಿತಾದ ಚರ್ಚಾ ಕೇಂದ್ರವಾಗಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್, ಜಿಪಂ ಸದಸ್ಯ ರಮೇಶ್, ತಾಪಂ ಸದಸ್ಯ ಪ್ರಸನ್ನ, ತಾ. ಬಿಜೆಪಿ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮಹದೇವ ಹೆಗ್ಗಡೆ, ಬಿಜೆಪಿ ಮುಖಂಡರಾದ ಅಣ್ಣಯ್ಯ ನಾಯ್ಕ, ಚಂದ್ರಶೇಖರ್, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಸಣ್ಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಸದಸ್ಯರಾದ ರಾಮಚಂದ್ರ, ಮುಖಂಡರಾದ ಚಿಕ್ಕಸ್ವಾಮಿ, ನಾಗಯ್ಯ, ಪಿಡಿಒ ಇದ್ದರು.
ತಾಯಿ ಮಗಳು ನಾಪತ್ತೆ
ಮೈಸೂರು: ಕೆ.ಆರ್. ಠಾಣೆ ವ್ಯಾಪ್ತಿಯ ನಿವಾಸಿ ಮೋಹನ್ ಅ. ಲೋಕೇಶ್ ಎಂಬವರ ಪತ್ನಿ ಎಂ.ಕಾತ್ಯಾಯಿನಿ (30) ಹಾಗೂ ಮಗಳು ವಸುಂದರಾ (5) ಮಂಗಳವಾರ ನಾಪತ್ತೆಯಾಗಿದ್ದಾರೆ. ಪತ್ನಿ ಮತ್ತು ಮಗಳು ಮನೆಯಲ್ಲಿದ್ದ ಬೆಳ್ಳಿ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಣೆಯಾಗಿರುವ ಇಬ್ಬರನ್ನು ಪತ್ತೆ ಮಾಡಿಕೊಡುವಂತೆ ಮೋಹನ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಾತ್ಯಾಯಿನಿ ಚಹರೆ- 5.4 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ದೃಢಕಾಯ ಶರೀರ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ವಸುಂದರಾ ಚಹರೆ- 3 ಅಡಿ ಎತ್ತರ, ಗೋದಿ ಮೈಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂಪರ್ಕಿಸಿ.
ಮೇಲ್ಮನೆಗೆ ನೇಮಿಸಲು ಮನವಿ
ಹುಣಸೂರು: ಆದಿವಾಸಿಗಳಿಗಾಗಿ ದುಡಿಯುತ್ತಿರುವ ತಮ್ಮನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವಂತೆ ಗಿರಿಜನ ಕ್ರಿಯಾಕೂಟದ ರಾಜ್ಯ ಸಂಚಾಲಕ ಎಸ್.ಶ್ರೀಕಾಂತ್ ಹಾಗೂ ರಾಜ್ಯ ಮೂಲ ನಿವಾಸಿ ಮತ್ತು ಅರಣ್ಯವಾಸಿ ಬುಡಕಟ್ಟುಗಳ ವೇದಿಕೆಯ ರಾಜ್ಯ ಸಂಚಾಲಕ ಜೆ.ಪಿ.ರಾಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.