ಪುರದಕಟ್ಟೆಯಲ್ಲಿ ಗುಲಾಬಿ ಕೃಷಿ ತರಬೇತಿ
ಎಚ್.ಡಿ. ಕೋಟೆ: ತಾಲೂಕಿನ ಹಂಚಿಪುರ ವಲಯದ ಪುರದಕಟ್ಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಗುಲಾಬಿ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು. ಗುಲಾಬಿ ಕೃಷಿ ತರಬೇತಿಯ ಬಗ್ಗೆ ಸಹಾಯಕ ತೋಟಗಾರಿಕಾ ನಿರ್ದೇಶಕ ಸಿದ್ದರಾಜು ಮಾತನಾಡಿ, ಮಣ್ಣು ಪರೀಕ್ಷೆ, ಜಮೀನಿನ ಸಿದ್ಧತೆ, ನಾಟಿ ಕಾಲ, ಸಸಿಗಳ ಅಂತರ, ನೀಡಬೇಕಾದ ಗೊಬ್ಬರಗಳು, ನೀರು ನಿರ್ವಹಣೆ ಮತ್ತು ಬರುವಂತಹ ರೋಗಗಳು ಹಾಗೂ ರೋಗ ಬಂದಾಗ ನೀಡಬೇಕಾದ ಔಷಧಗಳ ಬಗ್ಗೆ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪದ್ಮಾ ಬಸವರಾಜು, ಕೃಷಿ ಅಧಿಕಾರಿಗಳಾದ ಲಿಂಗರೆಡ್ಡಿ, ಮೇಲ್ವಿಚಾರಕ ಪುನಿತ್ಕುಮಾರ್ ಮತ್ತು ಸೇವಾಪ್ರತಿನಿಧಿಗಳಾದ ವಸಂತ ಪಾಟೀಲ್ ಮತ್ತು ಪುರದಕಟ್ಟೆ ಗ್ರಾಮದ ರೈತರು ಇದ್ದರು.
ಸೋಸಲೆಯಲ್ಲಿ ಶಾಲಾ ದಾಖಲಾತಿ ಆಂದೋಲನ
ಟಿ. ನರಸೀಪುರ: ತಾಲೂಕಿನ ಸೋಸಲೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದಾಖಲಾತಿ ಆಂದೋಲನದ ಪ್ರಯುಕ್ತ ಜಾಥಾ ನಡೆಸಿದರು. ತಾಲೂಕಿನ ವೀರಪ್ಪಒಡೆಯರ ಹುಂಡಿ ಗ್ರಾಮದ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಗೊಂಡ ಶಾಲಾ ಮಕ್ಕಳ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ಸೋಸಲೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ 2014-15ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಮಕ್ಕಳನ್ನೂ ಶಾಲೆಗೆ ಕಳುಹಿಸುವಂತೆ ಪೋಷಕರ ಗಮನ ಸೆಳೆದರು. ಮುಖ್ಯ ಶಿಕ್ಷಕಿ ಆರ್.ಸೌಭಾಗ್ಯವತಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆ ಹಿನ್ನೆಲೆ ಶೈಕ್ಷಣಿಕ ವರ್ಷಾರಂಭವಾದ್ದರಿಂದ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಪ್ರತಿಯೊಬ್ಬರು ಶಿಕ್ಷಿತರಾಗಲಿ ಎಂಬ ಸದುದ್ದೇಶದಿಂದ ಮಧ್ಯಾಹ್ನ ಬಿಸಿಯೂಟ ಜೊತೆಗೆ ಶಿಕ್ಷಣ ಹಾಗೂ ಸಮವಸ್ತ್ರವನ್ನು ಉಚಿತವಾಗಿ ನೀಡುತ್ತಿದೆ. ಆದ್ದರಿಂದ ಹೆತ್ತವರು ತಪ್ಪದೆ ಮಕ್ಕಳನ್ನೂ ಶಾಲೆಗಳಿಗೆ ಸೇರಿಸಬೇಕೆಂದು ಮನವಿ ಮಾಡಿದರು. ಜಾಥಾದಲ್ಲಿ ಶಿಕ್ಷಕರಾದ ಜಿ.ಪರಶಿವಮೂರ್ತಿ, ನಂಜುಂಡಯ್ಯ, ಎನ್. ಅನುಪಮ ಹಾಗೂ ವಿದ್ಯಾರ್ಥಿಗಳು ಇದ್ದರು.
ಸುಬ್ರಹ್ಮಣ್ಯಗೆ ಡಾಕ್ಟರೇಟ್
ಮೈಸೂರು: ಪ್ರೊ.ಭಾರ್ಗವ್ ಎಸ್.ವಿ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಬಿ.ಎಸ್. ಸುಬ್ರಹ್ಮಣ್ಯ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಕೆನಡಾದ ಐನ್ಸ್ಟೇನ್ ಇಂಟರ್ನ್ಯಾಷನಲ್ ವಿವಿ ಅಂಗೀಕರಿಸಿ ವಾಣಿಜ್ಯ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಪ್ರವೇಶಕ್ಕೆ ಅರ್ಜಿ
ಹುಣಸೂರು: ಹುಣಸೂರು ತಾಲೂಕು ಹಾಗೂ ಟೌನ್, ಗೆರೆಸನಹಳ್ಳಿ, ಬಿಳಿಕೆರೆ, ಹಿರಿಕ್ಯಾತನಹಳ್ಳಿ, ತಟ್ಟೆಕರೆ ಹಾಗೂ ಹನಗೂಡು ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಮತ್ತು ಟೌನ್ನಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ, ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಹುಣಸೂರು ಟೌನ್ನಲ್ಲಿರುವ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಲೇಖನ ಸಾಮಗ್ರಿ, ನೋಟ್ ಪುಸ್ತಕ, ಸಮವಸ್ತ್ರ, ಬಟ್ಟೆ ಸೋಪು, ಮೈಸೋಪು, ಕೊಬ್ಬರಿ ಎಣ್ಣೆ, ಟೂತ್ ಪೇಸ್ಟ್ ನೀಡಲಾಗುವುದು. ಅರ್ಜಿಯನ್ನು ಸಂಬಂಧಿಸಿದ ವಿದ್ಯಾರ್ಥಿನಿಲಯಗಳಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಗೆ 2014ರ ಜೂ. 10ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹುಣಸೂರು ತಾಲೂಕು ಇವರನ್ನು ಸಂಪರ್ಕಿಸಬಹುದು.
ಅಧ್ಯಕ್ಷರ ಆಯ್ಕೆ
ಬನ್ನೂರು: ಟಿ.ನರಸೀಪುರ ತಾಲೂಕಿನ ತುರುಗನೂರು ಗ್ರಾಪಂ ಅಧ್ಯಕ್ಷರಾಗಿ ಶಿವಲಿಂಗಮ್ಮ ಹಾಗೂ ಉಪಾಧ್ಯಕ್ಷರಾಗಿ ಕೆಂಪಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಪಶುಪಾಲನ ಇಲಾಖೆ ಸಹ ನಿರ್ದೇಶಕ ಡಾ. ಚಿನ್ನಸ್ವಾಮಿ ಘೋಷಿಸಿದರು.
ಹುಟ್ಟುಹಬ್ಬ
ಕೆ.ಆರ್. ನಗರ: ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ವಿ. ದೇವರಹಟ್ಟಿಯವರ 35ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜೂ.2 ರಂದು ಸೋಮವಾರ ಅಮಿತ್ ವಿ. ದೇವರಹಟ್ಟಿ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯದರ್ಶಿ ಜಿ.ಎಂ. ಹೇಮಂತ್ ಹೇಳಿದರು.
ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ
ಟಿ. ನರಸೀಪುರ: ತಾಲೂಕಿನ ಮೂಗೂರು, ತಲಕಾಡು, ಬನ್ನೂರು ಹಾಗೂ ರಂಗಸಮುದ್ರ ಗ್ರಾಮಗಳಲ್ಲಿ ಮೆಟ್ರಿಕ್ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಹಾಗೂ ಟಿ.ನರಸೀಪುರ ಟೌನ್ನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಪಿಯುಸಿ, ಪದವಿ ತರಗತಿ, ಡಿಪ್ಲೋಮಾ, ಐಟಿಐ ಪ್ರವೇಶಕ್ಕೆ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ, ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಸಮವಸ್ತ್ರ, ಸೋಪು ಇತ್ಯಾದಿ ನೀಡಲಾಗುವುದು. ವಿದ್ಯಾರ್ಥಿಯ ಭಾವಚಿತ್ರ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಅಗತ್ಯ ದಾಖಲಾತಿಗಳೊಂದಿಗೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಟಿ. ನರಸೀಪುರ ಇಲ್ಲಿಗೆ ಜೂ. 10 ರೊಳಗೆ ಸಲ್ಲಿಸಬೇಕು. ಟೌನ್ನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಪಿಯುಸಿ, ಪದವಿ ತರಗತಿ, ಡಿಪ್ಲೋಮಾ, ಐಟಿಐ ಇತ್ಯಾದಿ ಮೆಟ್ರಿಕ್ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಸಹ ಅಗತ್ಯ ಮಾಹಿತಿಯೊಡನೆ 2014ರ ಜೂ.20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಸಂಪರ್ಕಿಸಬಹುದು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ
ಪಿರಿಯಾಪಟ್ಟಣ: ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಿಆರ್ಪಿ ಬಲರಾಮ್ ಹೇಳಿದರು. ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೋಷಕರು ತಮ್ಮ ಸ್ವಇಚ್ಛೆಯಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವಿಶಾಲವಾದ ಆಟದ ಮೈದಾನ, ಕೊಠಡಿಗಳು, ಉತ್ತಮ ಶಿಕ್ಷಕರು ಇದ್ದರೂ ಇತ್ತೀಚಿನ ದಿನಗಳಲ್ಲಿ ಕೆಲವರು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪೋಷಕರು ಮತ್ತು ಎಸ್ಡಿಎಂಸಿ ಸದಸ್ಯರು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಇದೇ ವೇಳೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿದ್ದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹದೇವಯ್ಯ, ಪ್ರಭಾರ ಮುಖ್ಯ ಶಿಕ್ಷಕಿ ಎಂ.ಎನ್. ನಾಗವೇಣಿ, ಎಸ್ಡಿಎಂಸಿ ಉಪಾಧ್ಯಕ್ಷ ಆನಂದ, ಗಣೇಶ್, ಮುಂಜೀರಾಬಾನು, ಶಿಕ್ಷಕಿಯರಾದ ಎಚ್.ಕೆ. ರೇಷ್ಮಾ, ಸರಿತಾ, ಮಹೇಶ್ವರಿ, ಗಿರಿಜಮಣಿ ಇದ್ದರು.
ಕೆಳಗನಹಳ್ಳಿ: ಸಿಡಿಲು ಬಡಿದು ನಾಲ್ವರಿಗೆ ಗಾಯ
ಪಿರಿಯಾಪಟ್ಟಣ: ಸಿಡಿಲು ಬಡಿದು ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಳಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಜರುಗಿದೆ. ಗ್ರಾಮದ ಪಾರ್ವತಮ್ಮ, ಕೀರ್ತಿ, ಸಣ್ಣಮ್ಮ, ಮಲ್ಲೇಗೌಡ ಸಿಡಿಲು ಬಡಿದು ಗಾಯಗೊಂಡವರು. ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಬಂದ ಕಾರಣ ಎಲ್ಲರೂ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.
ದಲ್ಲಾಳು ಕೊಪ್ಪದ ಇಬ್ಬರು ಸ್ನೇಹಿತೆಯರು ನಾಪತ್ತೆ
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ದಲ್ಲಾಳುಕೊಪ್ಪಲು ಗ್ರಾಮದಲ್ಲಿ ಒಂದೇ ದಿನ ಗೆಳತಿಯರಿಬ್ಬರು ಕಣ್ಮರೆಯಾಗಿದ್ದಾರೆ. ಗ್ರಾಮದ ದಿನೇಶರ ಪತ್ನಿ ಅನು ಹಾಗೂ ಸೋಮ ಅವರ ಪತ್ನಿ ಸರಿತಾ ಕಣ್ಮರೆಯಾದ ಸ್ನೇಹಿತೆಯರು. ಮೂರು ತಿಂಗಳ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಮೇ 23ರ ಮಧ್ಯಾಹ್ನ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿಲ್ಲ. ಅನು ಅವರ ತಂದೆ ಕಾಳೇಗೌಡರು ಹಾಗೂ ಸರಿತಾಳ ತಂದೆ ಯೋಗೀಶ್ ದೂರು ದಾಖಲಿಸಿದ್ದು, ಇವರ ಮಾಹಿತಿ ದೊರೆತಲ್ಲಿ ದೂ.08222-240002 ಸಂಪರ್ಕಿಸಿ.