ರಸ್ತೆ ಕಾಮಗಾರಿಗೆ ಶಾಸಕರ ಚಾಲನೆ
ಕೆ.ಆರ್. ನಗರ: ತಾಲೂಕಿನ 14 ಗ್ರಾಮಗಳ ಪ.ಜಾತಿ ಮತ್ತು ಪಂಗಡಗಳ ಸಮಾಜದ ಕಾಲೋನಿಗಳ ರಸ್ತೆಗಳ ಕಾಂಕ್ರೀಟಿಕರಣ ಮತ್ತು ಚರಂಡಿ ನಿರ್ಮಾಣಕ್ಕೆ ಸರ್ಕಾರದಿಂದ 2 ಕೋಟಿ ಮಂಜೂರು ಮಾಡಿಸಿದ್ದು, ಈ ಎಲ್ಲ ಕಾಮಗಾರಿಗಳನ್ನು ವರ್ಷಾಂತ್ಯದ ವೇಳೆಗೆ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಮಾಯಿಗೌಡನಹಳ್ಳಿ ಗ್ರಾಮದ ಪರಿಶಿಷ್ಟ ಸಮಾಜದ ಕಾಲೋನಿಯ ರಸ್ತೆಗೆ ಎಸ್ಇಪಿ ಯೋಜನೆಯಡಿ 9 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರೀಟಿಕರಣ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಚಾಮಲಾಪುರ, ಕಗ್ಗೆರೆ, ಹಳಿಯೂರು ಬಡಾವಣೆ, ಅರ್ಜುನಹಳ್ಳಿ, ದಡದಹಳ್ಳಿ, ಶ್ಯಾಬಾಳು, ಗ್ರಾಮಕ್ಕೆ ತಲಾ 20 ಲಕ್ಷ ಮತ್ತು ಗಳಿಗೆಕೆರೆ, ಮೂಲೆಪೆಟ್ಲು, ದೊಡ್ಡಕೊಪ್ಪಲು, ಹಾಡ್ಯ, ರಾಂಪುರ, ಚಿಬುಕಹಳ್ಳಿ, ಕುರುಬಳ್ಳಿ, ಕಾಟ್ನಾಳು ಗ್ರಾಮಗಳಿಗೆ ತಲಾ 10 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.
ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಸರ್ಕಾರದ ವೇತನಗಳನ್ನು ಪಡೆಯಲು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಇದನ್ನು ಮನಗಂಡು ಜೂ.6ರಂದು ಶುಕ್ರವಾರ ಹೋಬಳಿ ಕೇಂದ್ರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸ್ಥಳದಲ್ಲಿಯೇ ಸರ್ಕಾರದ ವಿವಿಧ ವೇತನಗಳಿಗೆ ಅರ್ಜಿ ಪಡೆದು ಮಂಜೂರಾತಿ ನೀಡಲಾಗುತ್ತದೆ ಎಂದು ಶಾಸಕರು ಪ್ರಕಟಿಸಿದರು.
ನಂತರ ಶಾಸಕರು ಗುಡುಗನಹಳ್ಳಿ ಗ್ರಾಮದಲ್ಲಿ 9.50 ಲಕ್ಷ ಮತ್ತು ಹಲಗೇಗೌಡನ ಕೊಪ್ಪಲು ಗ್ರಾಮದಲ್ಲಿ 6.95 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರೀಟಿಕರಣ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಡಿ.ಎಸ್.ಜಗದೀಶ್, ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್, ಜೆಡಿಎಸ್ ಮುಖಂಡರಾದ ಸಿ.ಜಿ. ಮಧು, ಕೃಷ್ಣಮೂರ್ತಿ, ಎಚ್.ಎಸ್.ಜಗದೀಶ್, ಚೆಲುವೇಗೌಡ, ಎಂ.ಟಿ. ಮಂಜುನಾಥ್, ಯಶವಂತ, ಮದನ್, ಅಣ್ಣಯ್ಯಶೆಟ್ಟಿ, ರಾಘವೇಂದ್ರ, ರಾಜೇಶ, ಭಾಸ್ಕರ, ಶಂಭುದೇವ, ಹಾರಂಗಿ ಉಪ ವಿಭಾಗದ ಎಇಇ ಕೆ.ಬಿ. ಪ್ರಕಾಶ್, ಎಂಜಿನಿಯರ್ ಪ್ರಕಾಶ್, ಉಪತಹಸೀಲ್ದಾರ್ ತಿಮ್ಮಯ್ಯ, ನಿವೃತ್ತಶಿಕ್ಷಕ ಸಿ.ಟಿ. ಜಗದೀಶ್ ಇದ್ದರು.