ಸಾಲ ಮನ್ನಾ ಯೋಜನೆ ಅಕ್ರಮ ತನಿಖೆ
ಕ.ಪ್ರ.ವಾರ್ತೆ ಮೈಸೂರು ಮೇ 30
ಸಾಲ ಮನ್ನಾ ಯೋಜನೆಯಲ್ಲಿ ನಡೆದಿರುವ ಅಕ್ರಮ ಕುರಿತು ತನಿಖೆ ನಡೆಸಲು ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎಲ್.ಮಾದಪ್ಪ, ರೈತರು ಕೃಷಿ ಸಹಕಾರ ಸಂಘದಿಂದ ಪಡೆದಿರುವ 25 ಸಾವಿರದವರೆಗಿನ ಸಾಲ ಮತ್ತು ಬಡ್ಡಿ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದುವರೆಗೆ ಜಿಲ್ಲೆಯಲ್ಲಿ ನೂರಾರು ರೈತರಿಗೆ ಯೋಜನೆಯ ಲಾಭ ಇನ್ನೂ ದೊರೆತಿಲ್ಲ. ರೈತರಿಗೆ ದೊರೆಯಬೇಕಾಗಿದ್ದ 2.97 ಕೋಟಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಸಾಲ ಮನ್ನಾ ಯೋಜನೆಯಲ್ಲಿ ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಅವ್ಯವಹಾರ ನಡೆಸಿರುವ ಸಾಧ್ಯತೆ ಇದ್ದು, ಕೂಡಲೇ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಿ ಸಮಗ್ರ ತನಿಖೆ ನಡೆಸಬೇಕು. ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವವರಿಗೆ ಹೊಸದಾಗಿ ಸಾಲ ನೀಡಲು ಸಹಕಾರ ಸಂಘಗಳು ಹಿಂದೇಟು ಹಾಕುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ದೂರಿದರು.
ಬಿಜೆಪಿಯ ಕೆಂಪಣ್ಣ, ಜೆಡಿಎಸ್‌ನ ಸುನೀತಾ ವೀರಪ್ಪಗೌಡ, ಸಿ.ಜೆ.ದ್ವಾರಕೀಶ್, ಕಾಂಗ್ರೆಸ್‌ನ ನಂದಿನಿ ಚಂದ್ರಶೇಖರ್ ಅವರು ಸಾಥ್ ನೀಡಿ, ತನಿಖೆಗೆ ಪಟ್ಟು ಹಿಡಿದರು. ಈ ಬಗ್ಗೆ ತನಿಖೆ ನಡೆಸಿ ಹದಿನೈದು ದಿನಗಳೊಳಗೆ ವರದಿ ಪಡೆಯಲಾಗುವುದು. ನಂತರ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಕೂರ್ಗಳ್ಳಿ ಮಹದೇವು, ಸಿಇಒ ಗೋಪಾಲ್ ತಿಳಿಸಿದರು.
ಶಿಥಿಲ ಕಟ್ಟಡಗಳ ನೆಲಸಮ: ಶಿಥಿಲಗೊಂಡಿರುವ ಜಿಲ್ಲೆಯ 344 ಶಾಲೆಗಳ 488 ಕೊಠಡಿಗಳನ್ನು ಕೆಡವಲು ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. 8.35 ಕೋಟಿ ವೆಚ್ಚದಲ್ಲಿ 488 ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಸದಸ್ಯರಾದ ಕಾಂಗ್ರೆಸ್‌ನ ಎಂ.ಬಿ.ಸಿದ್ದೇಗೌಡ, ಜೆಡಿಎಸ್‌ನ ಜೆ.ಸುನೀತಾ ವೀರಪ್ಪಗೌಡ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹೊಸ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಯೋಜನೆ ರೂಪಿಸದಿರುವುದಕ್ಕೆ ಸದಸ್ಯ ಸಿದ್ದೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಜನಸಂಖ್ಯೆ ಬೆಳೆದಂತೆ ವಸತಿ ಪ್ರದೇಶಗಳು ಹೆಚ್ಚಾಗುತ್ತಿದ್ದು, ನೂತನ ರಸ್ತೆಗಳ ಅವಶ್ಯಕತೆ ಇದೆ. ಆದರೆ ಅಧಿಕಾರಿಗಳು ಹೊಸ ರಸ್ತೆಗಳ ಸರ್ವೆ ಕಾರ್ಯ ಕೈಗೊಳ್ಳದಿರುವ ಹಿನ್ನೆಲೆ ಜಿಲ್ಲೆಗೆ ವರ್ಷಂಪ್ರತಿ ಕೇವಲ 4 ಕೋಟಿ ಮಾತ್ರ ಅನುದಾನ ಬರುತ್ತಿದ್ದು, ಹೆಚ್ಚುವರಿ ಅನುದಾನ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ: ನಂಜನಗೂಡು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡು ಜನರು ಕೆರೆಯ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೊಳವೆ ಬಾವಿ ನಿರ್ಮಾಣ ಮಾಡಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಸದಸ್ಯ ಬಿಜೆಪಿಯ ಕಾ.ಪು. ಸಿದ್ದವೀರಪ್ಪ ಒತ್ತಾಯಿಸಿದರು.
ನಿರ್ಮಲ ಭಾರತ್ ಅಭಿಯಾನ ಯೋಜನೆಯಲ್ಲಿ ಗುರಿಮೀರಿ ಸಾಧನೆ ತೋರಿದ ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಸ್. ರಾಜು, ಬೀಚನಹಳ್ಳಿ ಗ್ರಾ.ಪಂ. ಅಧ್ಯಕ್ಷ ಜವರನಾಯಕ ಮತ್ತು ಕೆ.ಆರ್. ನಗರದ ಮಾಯಿಗೌಡನಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಿ.ಎನ್. ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಇದ್ದರು.
ಖಾತ್ರಿಗೆ 58.41 ಕೋಟಿ
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 2014-15ನೇ ಸಾಲಿಗೆ 58.41 ಕೋಟಿ ಬಿಡುಗಡೆಯಾಗಿದ್ದು, ತಾಲೂಕುವಾರು ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಜಿಪಂ ಸಿಇಒ ಗೋಪಾಲ್ ಹೇಳಿದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 4.15 ಕೋಟಿ ಬಿಡುಗಡೆಯಾಗಿದ್ದು, ಸದಸ್ಯರಿಂದ ಮಾಹಿತಿ ಪಡೆದು ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಪಂ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿ ಭೇಟಿ
ಮೈಸೂರು: ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಕುರಿತಂತೆ ಸರ್ಕಾರವು ಶಾಸಕ ಹಾಗೂ ರಾಜ್ಯ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್ ಅಧ್ಯಕ್ಷತೆಯ 21 ಜನರನ್ನೊಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿದೆ ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ಹೇಳಿದ್ದಾರೆ. ಸಮಿತಿಯು ಜೂ.3ರ ಬೆಳಗ್ಗೆ 11ಕ್ಕೆ ಮೈಸೂರು ಜಿಪಂ ಕಚೇರಿ ಸಭಾಂಗಣದಲ್ಲಿ ಮೈಸೂರು ವಿಭಾಗದ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಾದ ಜಿಪಂ ಹಾಗೂ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಸಕ್ತ ಗ್ರಾಮ ಪಂಚಾಯತ್ ಅಧ್ಯಕ್ಷರುಗಳೊಡನೆ ಚರ್ಚೆ ನಡೆಸಲಿದೆ. ಈ ಸಭೆಗೆ ಮೈಸೂರು ವಿಭಾಗದ ಜಿಪಂ ಮತ್ತು ತಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಜರಾಗಿ ಸಮಿತಿಗೆ ಸೂಕ್ತ ಸಲಹೆ ನೀಡುವಂತೆ ಸರ್ಕಾರದಿಂದ ತಿಳಿಸಲಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಕುರಿತಂತೆ ಸಲಹೆಗಳನ್ನು ನೀಡುವಂತೆ ತಿಳಿಸಿದ್ದಾರೆ.