ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರತಿ ತಿಂಗಳ 7 ರಂದು ಆಹಾರ ಅದಾಲತ್: ಸಿಎಂ

Srinivasa Murthy VN
Updated On : 1 Jun 2014, 1:45 am

ಮೈಸೂರು: ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಆಹಾರ ಖಾತ್ರಿ ನೀಡಿರುವ ರಾಜ್ಯ ಸರ್ಕಾರ ಇನ್ನು ಮುಂದೆ ಪ್ರತಿ ತಿಂಗಳು 7 ರಂದು ಆಹಾರ ಅದಾಲತ್ ಕೂಡ ನಡೆಸಲಿದೆ.
ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ. ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕು. ಯಾರಿಗೂ ಆಹಾರ ಪದಾರ್ಥ ಇಲ್ಲ ಎನ್ನಬಾರದು. ಯಾವುದೇ ಸಮಸ್ಯೆಗಳಿದ್ದರೂ ಆಹಾರ ಅದಾಲತ್‌ನಲ್ಲಿ ತಿಳಿಸಬೇಕು ಎಂದು ಅವರು ಹುಣಸೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ರಾಜಿನಾಮೆ ಕೊಡಲ್ಲ: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜನತೆ ನೀಡಿರುವ ತೀರ್ಪನ್ನು ತಲೆಬಾಗಿ ಒಪ್ಪುತ್ತೇನೆ. ಅದನ್ನು ಪ್ರಶ್ನೆ ಮಾಡುವ ಹಕ್ಕಿಲ್ಲ. ಆದರೆ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೆಲವರು ನಮ್ಮ ಪಕ್ಷ ಮೈಸೂರಿನಲ್ಲಿ ಸೋತಿದ್ದನ್ನು ನೆಪವಾಗಿಟ್ಟುಕೊಂಡು ನನ್ನ ರಾಜಿನಾಮೆ ಕೇಳುತ್ತಿದ್ದಾರೆ. ಆದರೆ ನಾನು ರಾಜಿನಾಮೆ ಕೊಡಲ್ಲ.
ಅಹಿಂದ ಸರ್ಕಾರವಲ್ಲ:  ತಮ್ಮದು ಅಹಿಂದ ಸರ್ಕಾರ ಎಂದು ಕೆಲವರು ಟೀಕೆ ಮಾಡುತ್ತಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮ್ಮ ಸರ್ಕಾರ ಎಲ್ಲಾ ವರ್ಗದ ಬಡವರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದಿದ್ದಾರೆ ಸಿಎಂ. ಹುಟ್ಟೂರು ಸಿದ್ದರಾಮಯ್ಯನ ಹುಂಡಿಯಲ್ಲಿ ನೀರಾವರಿ ಜಮೀನು ಇದೆ. ನೀರಾವರಿ ಇಲ್ಲದ ಜಮೀನು ಇದೆ. ನೀರಾವರಿ ಇರುವ ಜಮೀನಿನವರು ಮಾತ್ರ ಬತ್ತ ಬೆಳೆದು, ಅನ್ನ ಉಣ್ಣುತ್ತಿದ್ದವರು. ಉಳಿದವರು ಅನ್ನ ಮಾಡುತ್ತಿದ್ದುದು ಹಬ್ಬಗಳಲ್ಲಿ ಹಾಗೂ ನೆಂಟರು ಬಂದಾಗ ಮಾತ್ರ.
ಸಣ್ಣ ಮಕ್ಕಳಿಗೆ ಜ್ವರ ಬಂದ್ರೆ ರಾಗಿ, ಜೋಳದ ಮುದ್ದೆ ತಿನ್ನಿಸಲು ಆಗುತ್ತಿರಲಿಲ್ಲ. ಹೀಗಾಗಿ ಅವರು ಆ ಮಕ್ಕಳನ್ನು ಎತ್ತಿಕೊಂಡು ಬತ್ತ ಬೆಳೆಯುವರರ ಮನೆ ಮುಂದೆ ಹೋಗಿ ತುತ್ತು ಅನ್ನಕ್ಕಾಗಿ ಗೋಗರೆಯುತ್ತಿದ್ದರು. ಇದರಿಂದಾಗಿಯೇ ಅಧಿಕಾರಕ್ಕೆ ಬಂದ ತಕ್ಷಣ ಅನ್ನಭಾಗ್ಯ ಯೋಜನೆ ರೂಪಿಸಿದೆ. ಈ ಯೋಜನೆಯ ಫಲವನ್ನು ಜನ ಪಡೆಯುತ್ತಿದ್ದಾರೆ. ಆದರೂ ಕೆಲವರು ಇದನ್ನು ಕನ್ನಭಾಗ್ಯ ಎಂದು ಟೀಕಿಸುತ್ತಿದ್ದಾರೆ ಎಂದರು ಸಿಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement