ಅಂಚೆ ಮತದಾನ ವೇಳೆ ಅಧಿಕಾರಿಗಳೊಂದಿಗೆ ಕೆಜೆಪಿ ವಾಗ್ವಾದ
ದೇವದುರ್ಗ: ಪಟ್ಟಣದಲ್ಲಿ ಅಂಚೆ ಮತದಾನದ ವೇಳೆ ಬಿಜೆಪಿ ಪರ ಕೆಲ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ ಕೆಜೆಪಿ ಮತ್ತು ಅಧಿಕಾರಿಗಳ ಮಧ್ಯೆ ಸೋಮವಾರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ಪಟ್ಟಣದ ಶಿಕ್ಷಣ ಇಲಾಖೆಯ ಚಂದ್ರಹಾಸ ನಾಯಕ, ಹೇಮನೂರು ಶಾಲೆಯ ಶಿಕ್ಷಕ ಯಲ್ಲನಗೌಡ ಸೇರಿ ಕೆಲ ಶಿಕ್ಷಕರು ಮಿನಿ ವಿಧಾನಸೌಧದಲ್ಲಿ ನಡೆಯುತ್ತಿದ್ದ ಅಂಚೆ ಮತದಾನ ಪ್ರಕ್ರಿಯೆ ವೇಳೆ ಮತಗಟ್ಟೆ ಬಳಿಯೇ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿ ಕೆಜೆಪಿ ಕಾರ್ಯಕರ್ತರು ಚುನಾವಣೆ ಅಧಿಕಾರಿಗಳಿಗೆ ದೂರಿದರು.
ಈ ವೇಳೆ ಕೆಜೆಪಿ ಅಭ್ಯರ್ಥಿ ಶಾಂತಗೌಡ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಹಾಸ ನಾಯಕ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿತು. ಘಟನೆ ನಂತರದಲ್ಲಿ ಅಂಚೆ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚುನಾವಣಾಧಿಕಾರಿ ನಿರ್ಧರಿಸಿದರು.
ಹಿನ್ನೆಲೆ: ಪಟ್ಟಣದಲ್ಲಿ ಭಾನುವಾರ ಸಹ ಕೆಜೆಪಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಅಂಚೆ ಮತದಾನ ಮಾಡುವ ಸಿಬ್ಬಂದಿಗೆ ಬಿಜೆಪಿ ಪರವಾಗಿ ಮತ ಹಾಕುವಂತೆ ಒತ್ತಾಯಿಸಲಾಯಿತೆಂಬ ವಿಚಾರಕ್ಕೆ ಮಾರಾಮಾರಿಯಾಗಿತ್ತು. ಇಂಥದ್ದೇ ಘಟನೆ ಸೋಮವಾರವೂ ಮರುಕಳಿಸುವ ಮೊದಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು.
ಬಿಜೆಪಿ ಪರ ಮತಯಾಚನೆ- ಕ್ರಮ ಕೈಗೊಳ್ಳದ ಅಧಿಕಾರಿಗಳು: ಕೆಜೆಪಿ
ದೇವದುರ್ಗ: ಚುನಾವಣೆಗಾಗಿ ನಿಯೋಜನೆಗೊಂಡ ಸರ್ಕಾರಿ ಶಿಕ್ಷಕರು, ಇತರೆ ಇಲಾಖೆಯ ನೌಕರರು ಅಂಚೆ ಮತದಾನಕ್ಕೆ ಆಗಮಿಸಿದ ವೇಳೆ ಬಿಜೆಪಿ ಪರ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಜೆಪಿ ಅಭ್ಯರ್ಥಿ ಶಾಂತಗೌಡ ಒತ್ತಾಯಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಂಚೆ ಮತ ಹಾಕಲು ಆಗಮಿಸುವ ಸಿಬ್ಬಂದಿಗೆ ಶಾಸಕ ಕೆ. ಶಿವನಗೌಡರ ಮಾವ ಸರ್ಕಾರಿ ಶಿಕ್ಷಕ ಯಲ್ಲಗೌಡ ಹಾಗೂ ಶಿಕ್ಷಣ ಇಲಾಖೆಯ ಚಂದ್ರಹಾಸ ನಾಯಕ, ಸಿಆರ್ಸಿ ಭೀಮೋಜಿರಾವ್ ಜಗತಾಪ್, ಸಿಆರ್ಸಿ ಮೌನೇಶ ಅವರು ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಾಖಲೆ ಸಮೇತ ದೂರಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರ ಪ್ರಭಾವದ ಹಿನ್ನೆಲೆ ಅಧಿಕಾರಿಗಳು ಅಕ್ರಮ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮತದಾನದ ವೇಳೆ ಮತದಾರರನ್ನು ಹೊರತುಪಡಿಸಿ ಇನ್ನುಳಿದವರು ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿರಬೇಕು. ಆದರೆ ಪಟ್ಟಣದಲ್ಲಿ ಅಂಚೆ ಮತದಾನದ ವೇಳೆ ಮಿನಿ ವಿಧಾನಸೌಧದಲ್ಲಿಯೇ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಈ ನಾಲ್ವರು ಮತಗಟ್ಟೆಯೊಳಗೆ ಪ್ರವೇಶಿಸಿ ಬಿಜೆಪಿಗೆ ಮತ ಹಾಕುವಂತೆ ಹೇಳಿರುವುದು ಖಂಡನೀಯ ಎಂದು ಆರೋಪಿಸಿದರು. ಜಿಲ್ಲಾಡಳಿತ ಈ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಿನಿ ವಿಧಾನಸೌಧದ ಮುಂದೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೆಜೆಪಿ ಅಭ್ಯರ್ಥಿ ರೋಡ್ ಶೋ
ಮಸ್ಕಿ: ಪಟ್ಟಣದಲ್ಲಿ ಸೋಮವಾರ ಕೆಜೆಪಿ ಅಭ್ಯರ್ಥಿ ಮಹಾದೇವಪ್ಪಗೌಡ ಪಾಟೀಲ್ ಅವರು ರೋಡ್ ಶೋ ನಡೆಸಿದರು. ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ತಮ್ಮ ಅಪಾರ ಬೆಂಬಲಿಗರೊಂದಿಗೆ ಅವರು ರೋಡ್ ಶೋ ಮೂಲಕ ಮತಯಾಚಿಸಿದರು. ಪೂಜಾರ್ ಪೇಟ್ನ ಬಡಾವಣೆಯಿಂದ ಮತಯಾಚನೆ ಆರಂಭಿಸಿದ ಗೌಡರು, ಮುಖ್ಯ ಬಜಾರ್, ಸಂತೆ ಬಜಾರ್ ಸೇರಿ ವಿವಿಧ ವಾರ್ಡ್ಗಳಲ್ಲಿನ ಮನೆ ಮನೆಗೆ ತೆರಳಿ ಮತಯಾಚಿಸಿದರು. ರೈತ ಮುಖಂಡ ಬಾಬುಗೌಡ ಇಲಾಲಪೂರು, ತಿಮ್ಮನಗೌಡ ಗುಡದೂರು, ಚನ್ನಪ್ಪ ಬ್ಯಾಳಿ, ಸಿದ್ಲಿಂಗಯ್ಯ ಸ್ವಾಮಿ ಗಚ್ಚಿನಮಠ, ಮಲ್ಲಪ್ಪ ಕುಡತಿನಿ, ಮಲ್ಲೇಶಪ್ಪ ಬ್ಯಾಳಿ, ಬಸಣ್ಣ ತೊಂತನಾಳ, ಮೌನೇಶ, ಸೂಗಣ್ಣ ಪಾಲ್ಗೊಂಡಿದ್ದರು.