ಕುಡಿವ ನೀರಿಗೆ ಕೃತಕ ಅಭಾವ
ಕನ್ನಡಪ್ರಭ ವಾರ್ತೆ ರಾಯಚೂರು ಏ.29
ನಗರದಲ್ಲಿ ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದಕ್ಕೆ ನಗರಸಭೆ ಎಂಜಿನಿಯರ್ಗಳೇ ಹೊಣೆಯಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಆರೋಪಿಸಿದರು.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಚುನಾವಣೆಯ ನಾಮಪತ್ರ ಸಲ್ಲಿಕೆ ನಂತರದಿಂದಲೇ ನಗರದಲ್ಲಿ ನಗರಸಭೆಯ ಅಧಿಕಾರಿಗಳು ಕುಡಿವ ನೀರಿನ ಕೃತಕ ಅಭಾವ ಸೃಷ್ಟಿ ಮಾಡಿದ್ದಾರೆ. ವಸ್ತುಸ್ಥಿತಿಯಲ್ಲಿ ನೀರಿನ ಅಭಾವವಿಲ್ಲ. ನದಿಗಳಲ್ಲಿ ನೀರಿದ್ದು, ನಗರಕ್ಕೆ ಕುಡಿಯುವ ನೀರೊದಗಿಸುವ ಗಣೇಕಲ್ ಜಲಾಶಯದಲ್ಲಿ ಕಳೆದ ವರ್ಷಗಳಿಗಿಂತ ಪ್ರಸಕ್ತ ವರ್ಷ ಹೆಚ್ಚಿನ ನೀರಿನ ಸಂಗ್ರಹವಿದೆ. ಆದರೂ ನೀರಿನ ಅಭಾವ ಉಂಟು ಮಾಡುವ ಮೂಲಕ ಚುನಾವಣೆಯಲ್ಲಿ ತಮಗೆ ಹಿನ್ನಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕುಮ್ಮಕ್ಕು: ನಗರಸಭೆಯಲ್ಲಿ ಕಾಂಗ್ರೆಸ್ ಮಂಡಳಿ ಅಧಿಕಾರದಲ್ಲಿದೆ. ಅದರಿಂದಲೇ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಬಿಂಬಿಸುವ ಹುನ್ನಾರ ನಡೆದಿದೆ. ಇದಕ್ಕೆ ಇನ್ನಿತರ ರಾಜಕೀಯ ಪಕ್ಷಗಳ ಕುಮ್ಮಕ್ಕಿರುವ ಸಾಧ್ಯತೆಯಿದೆ ಎಂದು ದೂರಿದರು.
ನಗರಸಭೆ ಎಂಜಿನಿಯರ್ಗಳ ಕರ್ತವ್ಯಲೋಪದಿಂದಲೇ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕೃಷ್ಣಾ ನದಿಯಲ್ಲಿ ಅಗತ್ಯ ನೀರಿನ ಲಭ್ಯತೆಯಿದೆ. ಹಾಗೆಯೇ ಗಣೇಕಲ್ನಲ್ಲಿ 13ಅಡಿ ನೀರಿದ್ದು, ಪ್ರಸಕ್ತ ಬೇಸಿಗೆ ಅಂತ್ಯದವರೆಗೆ ನೀರೊದಗಿಸುವಷ್ಟು ಸಂಗ್ರಹವಿದೆ. ಆದರೆ ಪೌರಾಯುಕ್ತರು ಹಾಗೂ ಎಂಜಿನಿಯರ್ಗಳು ಉದ್ದೇಶಪೂರ್ವಕವಾಗಿ ಜನತೆಗೆ ನೀರಿನ ಕೃತಕ ಅಭಾವ ಸೃಷ್ಟಿ ಮಾಡಿದ್ದಾರೆಂದು ಟೀಕಿಸಿದರು.
ತೊಂದರೆ ತಪ್ಪಿಸಿ: ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳ ಶ್ರಮದ ಫಲವಾಗಿ ಗಣೇಕಲ್ ಜಲಾಶಯದಲ್ಲಿ ನೀರು ಸಂಗ್ರಹಿಸಲಾಗಿದೆ. ಕೃಷ್ಣಾ ನದಿಯಲ್ಲಿ ಅಗತ್ಯ ನೀರಿನ ಸಂಗ್ರಹವಿದೆ. ಆದರೂ ನೀರಿನ ಅಭಾವ ಉಂಟಾಗುತ್ತಿರುವುದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದ ಅವರು, ಕೂಡಲೇ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡು ಜನತೆಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ತಾವು ವಿರೋಧ ಪಕ್ಷದವರಾಗಿದ್ದರೂ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿದ್ದಾಗಿ ತಿಳಿಸಿದರು. ನಗರದ ಅಭಿವೃದ್ಧಿಗೆ ನಗರಸಭೆಯ ಮೂಲಕ ಕೋಟ್ಯಂತರ ರು. ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕೃಷ್ಣಾ ನದಿಯಿಂದ ನೀರು ಒದಗಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿ, ಚತುಷ್ಪಥ ರಸ್ತೆ ನಿರ್ಮಾಣವೂ ತಮ್ಮ ಅವಧಿ ಸಾಧನೆಯಾಗಿದೆ ಎಂದು ಹೇಳಿದರು.
ಮಾನ್ಯತೆಗಾಗಿ ಸಾಹಸ: ನಗರದ ಒಪೆಕ್ ಆಸ್ಪತ್ರೆಯನ್ನು ಪುನಾರಂಭ ಮಾಡುವುದು ತಮ್ಮ ಗುರಿಯಾಗಿದ್ದು, ಸದ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅದು ನನೆಗುದಿಗೆ ಬಿದ್ದಿದೆ. ರಿಮ್ಸ್ಗೆ ಒಪೆಕ್ ವಹಿಸುವ ತಂತ್ರ ವೈದ್ಯಕೀಯ ಶಿಕ್ಷಣ ಇಲಾಖೆ ಅನುಸರಿಸುತ್ತಿದೆ. ಆ ಮೂಲಕ ಎಂಸಿಐ ಸಂಸ್ಥೆ ಮಾನ್ಯತೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಆದರೆ ಒಪೆಕ್ ಆಸ್ಪತ್ರೆಯನ್ನು ಸ್ವಾಯತ್ತ ಸಂಸ್ಥೆಯಾಗಿಸುವ ತಮ್ಮ ಬೇಡಿಕೆ ನಿರಂತರವಾಗಿರಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಬಸವರಾಜ ರೆಡ್ಡಿ, ಜಯಣ್ಣ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ ಸೇರಿದಂತೆ ಮತ್ತಿತರರಿದ್ದರು.
ಬಿಜೆಪಿಗೆ ನಾಲ್ಕೈದು ಗೆಲವು
ರಾಯಚೂರು: ಬಿಜೆಪಿ ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಪೈಕಿ 4ರಿಂದ 5 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ. ಪಕ್ಷದ ಪರ ಮತದಾರರು ಪಾದಯಾತ್ರೆ ವೇಳೆ ಒಲವು ತೋರಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರು. ಬಿಡುಗಡೆಯಾಗಿದೆ. ಅದೇ ರೀತಿ ಗ್ರಾಮೀಣ ಭಾಗದ ಅಭಿವೃದ್ಧಿಗೂ ಸಾಕಷ್ಟು ಅನುದಾನ ಒದಗಿಸಿದ್ದು ಅದರ ಫಲವಾಗಿ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಟಿಕೊಂಡಿದ್ದು ಬೆಂಬಲಕ್ಕೆ ನಿಲ್ಲಲಿದ್ದಾರೆಂದು ಹೇಳಿದರು.
ಜನತೆ ತೊಂದರೆಯಲ್ಲಿ: ಬಿಜೆಪಿ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಮತದಾರರು ಆಯಾ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ತೆರಳಿದಾಗ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದು ಕಂಡುಬಂದಿದೆ. ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಒದಗಿಸಿದ ಅಭಿವೃದ್ಧಿ ಅನುದಾನ ಬಳಕೆಯಲ್ಲಿ ಎಡವಿದ್ದರಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಮಾತನಾಡಿ, ನಗರದ 27 ವಾರ್ಡ್ಗಳಲ್ಲಿ ಪಾದಯಾತ್ರೆ ಕೈಗೊಂಡು ಮತಯಾಚನೆ ಮಾಡಿದ್ದು, ಎಲ್ಲೆಡೆ ಪಕ್ಷದ ಪರ ಒಲವು ವ್ಯಕ್ತವಾಗಿದೆ. ಇನ್ನುಳಿದ ವಾರ್ಡ್ಗಳಲ್ಲಿಯೂ ಪಾದಯಾತ್ರೆ ಕೈಗೊಂಡು ಮತದಾರರಲ್ಲಿ ಬೆಂಬಲಿಸುವಂತೆ ಮನವಿ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ಗೆ ನಗರ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ನಾಯಕ ಅನಂತಕುಮಾರ್ ಅವರ ಭೇಟಿ ವೇಳೆ ಏರ್ಪಡಿಸಿದ್ದ ರೋಡ್ ಶೋಗೆ ಅಡ್ಡಿಪಡಿಸಲು ಗೂಂಡಾಗಳನ್ನು ಬಳಸಿತೆಂದು ಆರೋಪಿಸಿ, ಸೋಲಿನ ಹತಾಶೆಯಿಂದ ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡುವಂಥ ಕೃತ್ಯಕ್ಕೆ ಕಾಂಗ್ರೆಸ್ ಇಳಿದಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಕಾಂಗ್ರೆಸ್ ಗೂಂಡಾ ವರ್ತನೆ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಾಂಗ್ರೆಸ್ ಗೂಂಡಾ ವರ್ತನೆ ಕೂಡಲೇ ತಡೆಯದಿದ್ದಲ್ಲಿ ಚುನಾವಣೆಯ ಮತದಾನದ ವೇಳೆ ತೊಂದರೆಯಾಗುವ ಸಾಧ್ಯತೆಯಿದೆ. ಅನಗತ್ಯವಾಗಿ ಗೊಂದಲ ಹುಟ್ಟು ಹಾಕುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ. ಮತದಾರರಲ್ಲಿ ಭಯದ ವಾತಾವರಣ ಮೂಡಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಸದ್ಯದ ಕುಡಿಯುವ ನೀರಿನ ಸಮಸ್ಯೆಗೆ ಕಾಂಗ್ರೆಸ್ ಆಡಳಿತದಲ್ಲಿರುವ ನಗರಸಭೆಯೇ ಕಾರಣವಾಗಿದೆ. ನಗರದ 13,14, 15, 16, 17 ಮತ್ತು 18ನೇ ವಾರ್ಡ್ಗಳಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಅದರಿಂದಾಗಿ ಜನತೆ ಪರದಾಡುವಂತಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕ ಸೈಯದ್ ಯಾಸೀನ್ ಅವರ ವೈಫಲ್ಯವೂ ಇದರಲ್ಲಿದೆ ಎಂದು ಟೀಕಿಸಿದರು.
ನಗರದ ಜನತೆ ಪ್ರತಿ ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರಿಗೆ ಅಲೆದಾಡುವಂತಾಗಿದೆ. ನೀರಿನ ನಿರ್ವಹಣೆಯಲ್ಲಿ ಶಾಸಕರು ವಿಫಲರಾಗಿದ್ದಾರೆ. ನಗರಾಡಳಿತದ ವೈಫಲ್ಯ ಜನತೆಗೆ ಸಂಕಷ್ಟ ತಂದೊಡ್ಡಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಅಶೋಕ ಗಸ್ತಿ, ಆರ್. ತಿಮ್ಮಯ್ಯ, ಬಂಡೇಶ್ ವಲ್ಕಂದಿನ್ನಿ ಮತ್ತಿತರರು ಇದ್ದರು.