ಗುಡಿಹಾಳ 5ನೇ ಹಂತದ ಸುವರ್ಣ ಗ್ರಾಮಕ್ಕೆ ಆಯ್ಕೆ
ಅನ್ನಭಾಗ್ಯ ಯೋಜನೆ ಬಡ ಕುಟುಂಬಗಳಿಗೆ ವರದಾನ: ಪ್ರತಾಪಗೌಡ
ಕನ್ನಡಪ್ರಭ ವಾರ್ತೆ ಮುದಗಲ್ ಆ.11
ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಬಿಪಿಎಲ್ ಪಡಿತರದಾರರ ಪ್ರತಿ ಕುಟುಂಬಕ್ಕೆ 30 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಬಡ ಕುಟುಂಬಗಳಿಗೆ ವರದಾನವಾಗಿದೆ ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಶೀಘ್ರವೇ ಕಾಮಗಾರಿಗೆ ಚಾಲನೆ: ಅವರು ಸಮೀಪದ ಗುಡಿಹಾಳ ಗ್ರಾಮದಲ್ಲಿ ಅಭಿನಂದನೆ ಸ್ವೀಕರಿಸಿ, ನನ್ನನ್ನು ಎರಡನೇ ಅವಧಿಗೆ ಶಾಸಕನನ್ನಾಗಿ ಮರು ಆಯ್ಕೆ ಮಾಡಲು ಸಹಕರಿಸಿದ ಸರ್ವರಿಗೂಅಭಿನಂದಿಸುತ್ತೇನೆ. ಗುಡಿಹಾಳ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಗೆ ಆಯ್ಕೆಯಾಗಿದೆ. ನೂತನವಾಗಿ ಸರ್ಕಾರ ರಚನೆಯಾಗಿರುವುದರಿಂದ ಚಾಲನೆ ವಿಳಂಬವಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ದೊರಕಲಿದೆ. ಅದರಲ್ಲಿ ಸಿಸಿ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ರಾಜ್ಯದಲ್ಲಿ ನೂತನವಾಗಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ದೀನ ದಲಿತರ, ಬಡವರ, ಹಿಂದುಳಿಗ ವರ್ಗಗಳ, ರೈತರ ಪರವಾದ ಸರ್ಕಾರವಾಗಿದೆ. ಹೀಗಾಗಿ ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವಂತ ಬಡಕುಟುಂಬಗಳಿಗೆ ನೆರವಾಗಲು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಲು ಮಾರುವವರ ರೈತರಿಗೆ ಸಹಾಯಧನದ ಹೆಚ್ಚಳ, ಕೃಷಿ ಸಾಲ ರೈತರಿಗೆ ಹೆಚ್ಚಳ, ವಸತಿ ಯೋಜನೆಯ ಮನೆಗಳ ನಿರ್ಮಾಣಕ್ಕೆ ಧನಸಹಾಯ ಹೆಚ್ಚಳ ಸೇರಿದಂತೆ ದೀನ ದಲಿತರಿಗೆ, ಹಿಂದುಳಿದ ವರ್ಗದ ಜನತೆಗೆ, ಕಡು ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಕುರಿತು ಇಚ್ಛಾಶಕ್ತಿ ಹೊಂದಿದ್ದು, ಕೃಷ್ಣಾ ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಈ ಭಾಗದ ಯೋಜನೆಗಳ ಜಾರಿಗೆಗೆ ಆಸಕ್ತಿ ಹೊಂದಿದೆ ಎಂದರು.
ರೈತರ ಜಮೀನಿಗೆ ರಸ್ತೆ: ರೈತರಿಗಾಗಿ ಗ್ರಾಮೀಣಾಭಿವೃದ್ಧಿ ಸಚಿವರು ರೈತರ ಜಮೀನಿಗೆ ರಸ್ತೆ ಕಲ್ಪಿಸಲು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯನ್ನು ಎನ್‌ಆರ್‌ಇಜಿಯಲ್ಲಿ ಸೇರಿಸುವ ಕಾನೂನು ಕೂಡ ಜಾರಿಗೆ ತರಲಾಗಿದ್ದು, ಎಲ್ಲ ರೈತರ ಜಮೀನಿಗೆ ರಸ್ತೆಯಾಗಲಿದೆ ಎಂದರು.
ಕಳೆದ ಅವಧಿಯಲ್ಲಿ 600 ಕೋಟಿ ಅನುದಾನ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಿದ್ದು, ಎರಡನೇ ಅವಧಿಯಲ್ಲೂ ಕೂಡ ತಮ್ಮ ಪ್ರೀತಿ, ವಿಶ್ವಾಸ ಸಹಕಾರದೊಂದಿಗೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ ಮುಖಂಡರಾದ ಬಸವಂತರಾಯ ಕುರಿ, ಪಂಪಾಪತಿ ಚುಕನಟ್ಟಿ, ಕರಾರೈ ಸಂಘದ ಪ್ರಧಾನ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಯಲ್ಲೋಜಿರಾವ್ ಕೋರೆಕರ್, ಶರಣಪ್ಪ ತೆರಿಬಾವಿ ಇದ್ದರು.