ಧರ್ಮ ಆಚರಣೆಯಿಂದ ಪ್ರಗತಿ ಸಾಧ್ಯ: ಫಲಿಮಾರುಶ್ರೀ
ಯುವಗೋಷ್ಠಿಯಲ್ಲಿ ವಿದ್ಯಾಧೀಶ ತೀರ್ಥರ ಅನುಗ್ರಹ ಸಂದೇಶ
ಕನ್ನಡಪ್ರಭ ವಾರ್ತೆ ರಾಯಚೂರು ಆ.11
ಆಧುನಿಕತೆಯ ಭರಾಟೆಯಲ್ಲಿ ಯುವಕರು ಧರ್ಮ ಮರೆತು ಬದುಕು ಸಾಗಿಸುವುದು ಸರಿಯಲ್ಲ. ಧರ್ಮಾಚರಣೆ, ಸಂಪ್ರದಾಯದ ಪರಿಪಾಲನೆಯಿಂದ ಮಾತ್ರ ಪ್ರಗತಿ ಸಾಧ್ಯ ಎಂದು ಉಡುಪಿಯ ಫಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಸಲಹೆ ನೀಡಿದರು.
ಅವರು ನಗರದಲ್ಲಿ ಭಾನುವಾರ ಸಂಜೆ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಯುವಗೋಷ್ಠಿಯಲ್ಲಿ ಅನುಗ್ರಹ ಸಂದೇಶ ನೀಡಿ, ಯುವಕರಲ್ಲಿ ಧರ್ಮ ಜಾಗೃತಿ ಅವಶ್ಯಕ. ಎಲ್ಲ ಧರ್ಮೀಯರು ಧರ್ಮದ ಪಾಲನೆಯಲ್ಲಿ ಸಾಕಷ್ಟು ಮುಂದುವರೆದಿದ್ದಾರೆ. ಧರ್ಮ, ಸಂಪ್ರದಾಯಗಳ ಪರಿಪಾಲನೆಯಲ್ಲಿ ಬ್ರಾಹ್ಮಣ ಸಮಾಜವು ಹಿಂದುಳಿದಿದೆ. ಯುವಕರು ಧಾರ್ಮಿಕ ಚಿಂತನೆ ಹೊಂದುವುದು ಅವಶ್ಯ ಎಂದು ಹೇಳಿದರು.
ಸಂಪ್ರದಾಯ, ಸಂಸ್ಕೃತಿ, ಧರ್ಮವನ್ನು ಮರೆತು ಪ್ರಗತಿ ಸಾಧಿಸುವುದು ಅಸಾಧ್ಯ. ಬ್ರಾಹ್ಮಣ ಸಮಾಜದವರ ಅವಹೇಳನಕ್ಕೆ ಸ್ವತಃ ಬ್ರಾಹ್ಮಣ ಸಮಾಜದವರೇ ಅವಕಾಶ ಮಾಡಿಕೊಟ್ಟಂತಾಗಿದೆ. ಕಾದಂಬರಿ ಕಥೆಗಳಿಗೆ ಬ್ರಾಹ್ಮಣ ಸಮಾಜವೇ ವಿಷಯ ವಸ್ತುವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಬ್ರಾಹ್ಮಣ ಸಮಾಜದವರು ಅನೇಕ ಕಾರಣಗಳಿಗೆ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರಿಗೆ ಪಾಲಕರು ಕಾಳಜಿವಹಿಸಿ ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಸಜ್ಜುಗೊಳಿಸಬೇಕಿದೆ. ಮಕ್ಕಳೂ ಪಾಲಕರನ್ನು ಉಪೇಕ್ಷಿಸುವುದನ್ನು ಬಿಟ್ಟು ಗೌರವ ಭಾವನೆಯಿಂದ ಕಾಣುವಂತೆ ಸಲಹೆ ನೀಡಿದರು.
ಶಾಲೆಗಳಲ್ಲಿ ನೈತಿಕ ಶಿಕ್ಷಣ ಬೋಧನೆಯ ಕಾರ್ಯ ಆಗಬೇಕಿದೆ. ಪಠ್ಯಕ್ರಮದಲ್ಲಿ ಗುರುಹಿರಿಯರನ್ನು ಗೌರವಿಸುವ ಗುಣ ಮೂಡಿಸುವಂಥ ಹಾಗೂ ಸಂಸ್ಕೃತಿಯ ರಕ್ಷಣೆಗೆ ತುಡಿತವಿರುವಂಥ ಮಕ್ಕಳನ್ನು ರೂಪಿಸುವ ಶಿಕ್ಷಣ ಒಳಗೊಂಡಿರಬೇಕು. ಧರ್ಮ ಗ್ರಂಥಗಳ ಅಧ್ಯಯನ ಮತ್ತು ಮೌಲ್ಯಗಳ ಅಳವಡಿಕೆಯಿಂದ ಮಾತ್ರ ಬದುಕು ಸರಿದಾರಿಯಲ್ಲಿ ಸಾಗಲು ಸಾಧ್ಯ ಎಂದರು.
ಹೃದಯ ವೈಶಾಲ್ಯತೆಯ ನೆಪದಲ್ಲಿ ಬ್ರಾಹ್ಮಣ ಸಮಾಜದ ಪರಂಪರಾಗತವಾಗಿ ಬಂದಂಥ ಸಂಪ್ರದಾಯ, ಧಾರ್ಮಿಕ ಆಚರಣೆಗಳನ್ನು ಕೈಬಿಡದೇ ಯುವಕರು ಮುನ್ನಡೆಸಿಕೊಂಡು ಹೋಗುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗೋಷ್ಠಿಯಲ್ಲಿ ಭಾಗವಹಿಸಿದ್ದ ಯುವಕರು ಶ್ರೀಗಳೊಂದಿಗೆ ಸಂವಾದ ನಡೆಸಿದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಜನತೆ ಪಾಲ್ಗೊಂಡಿದ್ದರು.