ಧರ್ಮ ಗ್ರಂಥಗಳ ಅಧ್ಯಯನದಿಂದ ಸನ್ಮಾರ್ಗ ಸಾಧ್ಯ
ಈದ್ ಸೌಹಾರ್ದ ಕೂಟದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ನ ಸದಸ್ಯ ಮಂಗಳೂರಿನ ಇಸ್ಹಾಖ್ ಪುತ್ತೂರು
ರಾಯಚೂರು: ಪರಮಾತ್ಮನು ಮಾನವರಿಗೆ ಮಾತ್ರ ಆಲೋಚನಾ ಶಕ್ತಿ ನೀಡಿದ್ದು, ಅಂಥ ಶಕ್ತಿಯನ್ನು ಧಾರ್ಮಿಕ ಆಚರಣೆ, ಧರ್ಮ ಗ್ರಂಥಗಳ ಅಧ್ಯಯನಕ್ಕೆ ಬಳಕೆ ಮಾಡಿ ಬದುಕನ್ನು ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಜಮಾ ಅತೆ ಇಸ್ಲಾಮಿ ಹಿಂದ್ನ ಸದಸ್ಯ ಮಂಗಳೂರಿನ ಇಸ್ಹಾಖ್ ಪುತ್ತೂರು ಹೇಳಿದರು.
ನಗರದಲ್ಲಿ ಭಾನುವಾರ ಸಂಘಟನೆಯಿಂದ ಆಯೋಜಿಸಿದ್ದ ಈದ್ ಸೌಹಾರ್ದ ಕೂಟದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ, ದೈವಿಕ ಗ್ರಂಥಗಳ ಅಧ್ಯಯನ ಮತ್ತು ಅದರಲ್ಲಿನ ಸಾರದ ಅಳವಡಿಕೆಯಿಂದ ಮಾತ್ರ ಬದುಕು ಸಾರ್ಥಕತೆ ಕಾಣಲು ಸಾಧ್ಯ ಎಂದು ಹೇಳಿದರು.
ಮಾನವೀಯ ಮೌಲ್ಯ: ಧಾರ್ಮಿಕ ಆಚರಣೆಗಳಿಗೆ ಶತಮಾನಗಳಷ್ಟು ಇತಿಹಾಸವಿದೆ. ಪ್ರತಿಯೊಂದೂ ಧರ್ಮವು ಮಾನವೀಯ ಮೌಲ್ಯಗಳನ್ನೇ ಸಾರಿದೆ. ಆದರೆ ಅಧ್ಯಯನ ಮತ್ತು ಅರಿವಿನ ಕೊರತೆಯಿಂದಾಗಿ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗುತ್ತಿದೆ. ಸಮಾಜದಲ್ಲಿ ಎಲ್ಲ ಜಾತಿ ಜನಾಂಗದವರು ಒಗ್ಗೂಡಿ ಬಾಳುವ ನಿಟ್ಟಿನಲ್ಲಿ ಆಯಾ ಧರ್ಮಗಳ ಮಹಾನ್ ಗ್ರಂಥಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲ ಕೋಮುಗಳ ಮಧ್ಯೆ ಸೌಹಾರ್ದಯುತ ಸಂಬಂಧ ಬೆಳೆಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲ ಸಮಾಜದವರು ಪ್ರಯತ್ನಿಸಬೇಕು. ಕೋಮುಸೌಹಾರ್ದದ ವಿಚಾರಕ್ಕೆ ಸಂಬಂಧಿಸಿ ಚರ್ಚಿಸಲು ಮುಜುಗರಪಡುವಂಥ ಸ್ಥಿತಿಯಿದೆ. ಅದಕ್ಕೆ ಮೇಲು ಕೀಳು ಎಂಬ ಭಾವನೆಯೇ ಕಾರಣ ಎಂದರು.
ಮಹತ್ವ ಇದೆ: ಪ್ರತಿಯೊಂದೂ ಧರ್ಮದಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಅಂಥ ಹಬ್ಬಗಳಿಗೆ ಅವುಗಳದ್ದೇ ಆದ ಮಹತ್ವ ಮತ್ತು ಚಾರಿತ್ರಿಕ ಹಿನ್ನೆಲೆಯಿದೆ. ಅಂಥ ಹಿನ್ನೆಲೆ ಅರ್ಥೈಸಿಕೊಳ್ಳುವ ಕಾರ್ಯ ಎಲ್ಲ ಧರ್ಮದವರು ಮಾಡಬೇಕು. ಧರ್ಮ, ಧಾರ್ಮಿಕ ಆಚರಣೆಗಳ ಬಗ್ಗೆ ಪರಸ್ಪರ ಗೌರವ ಭಾವನೆ ಬೆಳೆದರೆ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಮಿಟ್ಟಿಮಲ್ಕಾಪುರ ಗ್ರಾಮದ ಶಾಂತಾಶ್ರಮದ ನಿಜಾನಂದ ಸ್ವಾಮಿ ಮಾತನಾಡಿ, ಧರ್ಮಗುರುಗಳು, ಧರ್ಮ ಗ್ರಂಥಗಳ ಅವಹೇಳನಗಳಿಂದಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಎಲ್ಲ ಧರ್ಮಗ್ರಂಥಗಳು ಎಲ್ಲರನ್ನೂ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡುತ್ತವೆ. ಯಾವುದೇ ಧರ್ಮವು ಪರಸ್ಪರ ಸಂಘರ್ಷಕ್ಕಿಳಿಯುವಂತೆ ಹೇಳುವುದಿಲ್ಲ. ಧರ್ಮವನ್ನು ಅರ್ಥೈಸಿಕೊಳ್ಳುವಲ್ಲಿ ಲೋಪ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನೆಯ ಗುಲ್ಬರ್ಗ ವಿಭಾಗದ ಅಧ್ಯಕ್ಷ ಮಹಮ್ಮದ್ ಅನ್ವರ್ ಹುಸೇನ್ ಸಾಬ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೆ. ಫಾದರ್ ಜಯರಾಜ್ ಪುಟ್ಟಿ, ಮುಹಮ್ಮದ್ ಅಬ್ದುಲ್ಲಾ ಜಾವೇದ್ ಇದ್ದರು.