ಮೂಲ ಸ್ವರೂಪದಲ್ಲೇ ಜಾರಿಯಾಗಲಿ
ಮುದಗಲ್ನಲ್ಲಿ ರೈತರ ಸಮಾವೇಶದಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರಿಂದ ಶಾಸಕರಿಗೆ ಮನವಿ
ಕನ್ನಡಪ್ರಭ ವಾರ್ತೆ ಮುದಗಲ್ ಆ.11
ಲಿಂಗಸ್ಗೂರು, ಮಾನವಿ ತಾಲೂಕಿನ ರೈತರ ಜೀವನಾಡಿಯಾಗಿರುವ ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಮೂಲ ಸ್ವರೂಪದಲ್ಲೇ ಜಾರಿಗೊಳಿಸಬೇಕು ಎಂದು ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಸಭೆ ಸೇರಿ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.
ರೈತರಿಗೆ ವಂಚನೆಯಾಗದಿರಲಿ: ನಂದವಾಡಗಿ ಏತ ನೀರಾವರಿ ಯೋಜನೆಯ ಮೂಲ ಸ್ವರೂಪವನ್ನು ಕೃಷ್ಣ ಜಲ ಭಾಗ್ಯ ನಿಗಮದ ಅಧಿಕಾರಿಗಳು ತಿರುಚಲಾಗಿದೆ. ಈಗ ಕೇವಲ 3.75 ಟಿಎಂಸಿ ನೀರು ಬಳಕೆ ಮಾಡಿಕೊಂಡು ಯೋಜನೆಯನ್ನು ಅಸಮರ್ಪಕಗೊಳಿಸಿ ಮಾನವಿ ತಾಲೂಕಿನ ಹಳ್ಳಿಗಳನ್ನು ನೀರಾವರಿ ಯೋಜನೆಯಿಂದ ವಂಚಿತಗೊಳಿಸುವ ಯೋಜನೆ ತಯಾರಿಸಲಾಗಿದೆ. ಮೂಲ ಯೋಜನೆ ಮೂಲಕ ಲಿಂಗಸ್ಗೂರು ತಾಲೂಕಿನ 47 ಹಳ್ಳಿಗಳು, ಮಾನವಿ ತಾಲೂಕಿ 23 ಹಳ್ಳಿಗಳ ಒಟ್ಟು 53 ಸಾವಿರ ಹೆಕ್ಟರ್ ಜಮೀನು ನೀರಾವರಿಗೆ ಒಳಪಡಿಸುವ ಉದ್ದೇಶ ಇತ್ತು. ಆದರೆ 3.75 ಟಿಎಂಸಿ ನೀರು ಮಾತ್ರ ಬಳಕೆ ಮಾಡಲು ಯೋಜನೆ ಸಿದ್ಧಪಡಿಸಿರುವುದು ಮಾಹಿತಿ ಬಂದಿದೆ. ಆದ್ದರಿಂದ 542 ಆರ್ಎಲ್ನಲ್ಲಿ ಯೋಜನೆ ಸಿದ್ಧವಾದರೆ ತಾಲೂಕಿವ ಕೆಲವೇ ಹಳ್ಳಿಗಳು ಮಾತ್ರ ನೀರಾವರಿಗೆ ಒಳಪಟ್ಟು, ಉಳಿದವುಗಳಿಗೆ ನೀರಾವರಿ ಯೋಜನೆ ವಂಚಿತವಾಗುತ್ತಿದೆ.
ಸರ್ಕಾರ ಯೋಜನೆಗೆ 6 ಟಿಎಂಸಿ ನೀರು ಬಳಕೆ ಮಾಡಿಕೊಂಡು ಲಿಂಗಸ್ಗೂರು, ಮಾನ್ವಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. 552 ಅರ್ಎಲ್ನಿಂದ ನೀರಾವರಿಗೆ ಒಳಪಡಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ಕೆಲವು ಅಧಿಕಾರಿಗಳ ಇಚ್ಛಾಶಕ್ತಿಯಿಂದ ಯೋಜನೆಯನ್ನು ತಿರುಚಲಾಗಿದೆ. ಆದ್ದರಿಂದ ಈ ಭಾಗದ ಶಾಸಕರು, ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ಹೊಂದಿ ಯೋಜನೆಯಲ್ಲಿರುವ ಎಲ್ಲಾ ಹಳ್ಳಗಳ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಮನವಿ ಮಾಡಿದರು.
ಆರ್ಸೆನಿಕ್ಮುಕ್ತ ನೀರು ದೊರೆಯಲಿ: ಈ ಯೋಜನೆಯಿಂದ ತಾಲೂಕಿನ, ಮಾನವಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರು ಸಮಸ್ಯೆ ನಿಭಾಯಿಸಿದಂತಾಗುತ್ತದೆ, ಆರ್ಸೆನಿಕ್ ನೀರು ಸೇವನೆಯಿಂದ ಮುಕ್ತಗೊಳಿಸಿದಂತಾಗುತ್ತದೆ. ಕೆರೆಗಳಿಗೆ ನೀರು ಸಂಗ್ರಹ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ ಪ್ರತಾಪಗೌಡ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರವರಿಗೆ ಮನವಿ ಸಲ್ಲಿಸಿದರು. ಸರ್ಕಾರ ಇಚ್ಛಾಸಕ್ತಿ ಹೊಂದಿದಲ್ಲಿ ಮಾತ್ರ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತದೆ ಎಂದರು.
ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ, ಕಾರ್ಯಾಧ್ಯಕ್ಷ ಶರಣಗೌಡ ಪಾಟೀಲ್ ಬಯ್ಯಾಪುರ, ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮುರಾರಿ, ಶರಣಗೌಡ ಬಸ್ಸಾಪೂರ, ಕಾರ್ಬದರ್ಶಿ ರಮೇಶ ಶಾಸ್ತ್ರಿ, ಪ್ರಚಾರ ಸಮಿತಿ ಅಧ್ಯಕ್ಷ ಬಸವಂತರಾಯ ಕುರಿ, ಪ್ರಕಾಶ ಮಸ್ಕಿ, ಸಿದ್ದಲಿಂಗೇಶ್ವರಗೌಡ, ಶಿವಕುಮಾರ ಗುಡಿಹಾಳ, ಉಪಾಧ್ಯಕ್ಷರುಗಳಾದ ಅಮರೇಗೌಡ, ರೈತ ಸಂಘದ ಕಾರ್ಯಾಧ್ಯಕ್ಷ ಅಮರಣ್ಣ ಗುಡಿಹಾಳ, ಮಲ್ಲೇಶಗೌಡ ಮಟ್ಟೂರು, ಶರಣಪ್ಪ ಜಾವೂರ ಸೇರಿದಂತೆ ಲಿಂಗಸ್ಗೂರು, ಮಾನ್ವಿ ತಾಲೂಕಿನ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಭರವಸೆ: ನೀರು ಹಂಚಿಕೆಯಾಗಿದ್ದು, ಯೋಜನೆ ಮೂಲ ಸ್ವರೂಪದಲ್ಲೇ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ, ನೀರಾವರಿ ಮಂತ್ರಿಗಳಿಗೆ ಮನವಿ ಮಾಡುವುದಾಗಿ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಭರವಸೆ ನೀಡಿದರು. ಯೋಜನೆಯಿಂದ ಲಿಂಗಸ್ಗೂರು, ಮಾನವಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಸರ್ಕಾರ ಯೋಜನೆ ಬಗ್ಗೆ ಇಚ್ಛಾಶಕ್ತಿ ಹೊಂದಿದೆ ಎಂದರು.