ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಘದ ನೌಕರರ ಒಕ್ಕೂಟಕ್ಕೆ ಆಯ್ಕೆ

Srinivasa Murthy VN
Updated On : 12 Aug 2013, 10:58 am

ರಾಯಚೂರು: ತಾಲೂಕು ಕೃಷಿ ಪತ್ತಿನ ಸಹಕಾರ ಸಂಘದ ನೌಕರರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅಮರೇಶ್ ಹೂಗಾರ್ ಗುಂಜಳ್ಳಿ ಆಯ್ಕೆಯಾಗಿದ್ದಾರೆ.
ಈಚೆಗೆ ಈ ಕುರಿತು ಕರೆದಿದ್ದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಅಮರೇಶ ಹೂಗಾರ್, ಉಪಾಧ್ಯಕ್ಷರಾಗಿ ಎಂಡಿ ಖಾಸಿಂ ಗಿಲ್ಲೆಸೂಗೂರು, ಕಾರ್ಯದರ್ಶಿಯಾಗಿ ಮಲ್ಲಪ್ಪ ಬಾಗಲಿ, ಸಹ ಕಾರ್ಯದರ್ಶಿಯಾಗಿ ಅಮರೇಶ ಹೊಸಪೇಟೆ, ಖಜಾಂಚಿಯಾಗಿ ಅಮರಪ್ಪ ಆಮದಿಹಾಳ, ಸಲಹೆಗಾರರಾಗಿ ತಮ್ಮಣ್ಣ ಅರಷಿಣಗಿ, ಶೇಖರಪ್ಪ ತಲಮಾರಿ ನೇಮಕಗೊಂಡಿದ್ದಾರೆಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

19ರಂದು ಸಿಂಧನೂರು ಬಂದ್ ಎಚ್ಚರಿಕೆ
ರಾಯಚೂರು: ಸಿಂಧನೂರು ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಮಾದಿಗ ಜನಾಂಗದವರ ಮೇಲೆ ದೌರ್ಜನ್ಯ ಎಸಗಿದವರನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸುವಂತೆ ಮಾದಿಗ ದಂಡೋರಾ ಮಾದಿಗ ರಿಸರ್ವೇಶನ್ ಹೋರಾಟ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಿಂಧನೂರು ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಮಾದಿಗ ಜನಾಂಗದವರ ಮೇಲೆ 74 ಜನ ಆರೋಪಿಗಳು ದೌರ್ಜನ್ಯ ಎಸಗಿದ್ದಾರೆ. ಮಾದಿಗ ಜನಾಂಗದವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ಆರೋಪಿಸಿದರು. ಮಾದಿಗ ಜನಾಂಗದವರನ್ನು ಗ್ರಾಮದಿಂದ ಹೊರಹಾಕುವ ಬಗ್ಗೆ ಗ್ರಾಮದ ಕುರುಬ ಜನಾಂಗದವರು ಬೆದರಿಕೆಯೊಡ್ಡುತ್ತಿದ್ದಾರೆ. ಅದರಿಂದಾಗಿ ಮಾದಿಗ ಜನಾಂಗದವರು ಗ್ರಾಮದಲ್ಲಿ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಕೂಡಲೇ ಮಾದಿಗ ಜನಾಂಗದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ತಪ್ಪಿದಲ್ಲಿ ಆ.19ರಂದು ಸಿಂಧನೂರು ನಗರ ಬಂದ್‌ಗೆ ಸಂಘಟನೆ ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ನರಸಪ್ಪ ದಂಡೋರಾ, ಅಶೋಕ ನಂಜಲ ದಿನ್ನಿ, ಆರ್. ರಾಮಸ್ವಾಮಿ, ಬಸವರಾಜ ಸಾಸಲಮರಿ ಮತ್ತಿತರರು ಇದ್ದರು.

ಇಂದು ಮುದಗಲ್ ಸಂಗಮನಾಥ ಜಾತ್ರೆ
ಮುದಗಲ್: ಸಮೀಪದ ಕನ್ನಾಪೂರಹಟ್ಟಿ ಗ್ರಾಮದ ಸಂಗಮನಾಥ ಜಾತ್ರಾ ಮಹೋತ್ಸವ ಸೋಮವಾರ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಜರುಗಲಿರುವ ಜಾತ್ರಾ ಮಹೋತ್ಸವ, ಶ್ರಾವಣ ಮಾಸದ ಮೊದಲನೇ ಸೋಮವಾರ ಬೆಳಗ್ಗೆ 5.40ಕ್ಕೆ ನಂದಿ ಮೂರ್ತಿ ಪ್ರತಿಷ್ಠಾಪನೆ ಜರುಗಲಿದೆ. ಅಂದೇ ಸಕಲ ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ಕಳಸಾರೋಹಣ ಜರುಗಲಿದೆ. ಗ್ರಾಮದ ಮಹಿಳೆಯರು ಕಳಸ ಕನ್ನಡಿಗಳೊಂದಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೊರಿದ್ದಾರೆ.

15 ರಂದು ಮುತ್ತಿಗೆ
ರಾಯಚೂರು: ದಲಿತರಿಗೆ ಸಮಾನತೆ ನೀಡದ ಮತ್ತು ದಲಿತರ ಮೇಲೆ ಹಲ್ಲೆ, ದೌರ್ಜನ್ಯ ತಡೆಯುವಲ್ಲಿನ ವೈಫಲ್ಯ ಖಂಡಿಸಿ ಆ.15ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ದಲಿತರಿಗೆ ಮೀಸಲಿರಿಸಿದ ಅನುದಾನ ಬಳಕೆ ಸೇರಿ ವಿವಿಧ ರೀತಿಯಲ್ಲಿ ಸರ್ಕಾರ ದಲಿತರನ್ನು ಕಡೆಗಣಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್‌ರಿಗೆ ಆ.15 ರಂದು ನಗರದಲ್ಲಿ ಮುತ್ತಿಗೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement